Monday 12 February 2018

ಎಲ್ಲವನ್ನು ತ್ಯಜಿಸಿದ ಬಹುಬಾಲಿಗೆ ಏಕೆ ಮಹಾಮಸ್ಥಾಭಿಷೇಕ


ಬಾಹುಬಲಿ ಎಂದರೆ ಅವನೊಬ್ಬ ಜ್ಞಾನಿ , ಯೋಗಿ, ವಿರಾಗಿ ಜೀವನದಲ್ಲಿ ಎಲ್ಲವನ್ನು ತ್ಯಜಿಸಿದವನು. ಬದುಕಿದ್ದಾಗಲೇ  ಉಟ್ಟ ಬಟ್ಟೆಯ ಮೇಲು ವ್ಯಾಮೋಹ ಇಲ್ಲದಂಥಹ ವ್ಯಕ್ತಿ. ಅನ್ನ,ನೀರು ಬಿಟ್ಟು ನಿರಾಹಾರಿಯಾಗಿ ತಪಸ್ಸಿಗೆ ನಿಂತವನು ಈ ಮಹಾನ್ ವ್ಯಕ್ತಿ. ಇವನ ಕಲ್ಲಿನ ಮೂರ್ತಿಗೆ  ಹಾಲು, ತುಪ್ಪ, ಗಂಧ, ಹರಿಶಿನ, ಕುಂಕುಮ ನೀರುಗಳಿಂದ ಅದ್ದೂರಿಯ ಮಹಾಮಸ್ಥಾಭಿಷೇಕ ಏಕೆ? ಜೈನ ತೀರ್ಥಂಕರರಲ್ಲಿ ಬಾಹುಬಲಿ 24 ನೆಯವನು ಉಳಿದ ತೀರ್ಥಂಕರರಿಗಿಂತ ಈತ ಹೇಗೆ ಭಿನ್ನ? ಬಾಹುಬಲಿಯ ಸರಳತೆ, ತ್ಯಾಗಕ್ಕೆ ಮತ್ತು  ವೈರಾಗ್ಯಕ್ಕೆ  ವ್ಯತಿರಿಕ್ತವಾಗಿ ಜನರು ಈ ಮಸ್ಥಾಭಿಷೇಕ ನಡೆಸುತ್ತಿದ್ದಾರೆಯೇ? ಈ ರೀತಿಯ ಅನೇಕ ಪ್ರಶ್ನೆಗಳು ನನ್ನ ತಲೆಯಲ್ಲಿ ಇತ್ತೀಚಿಗೆ ಗಿರಕಿ ಹೊಡೆಯುತಿವೆ. ಈ ರೀತಿಯ ನನ್ನ ಅನೇಕ ಪ್ರಶ್ನೆಗಳಿಗೆ ನಾನು ಉತ್ತರ ಹುಡುಕಲು ಹೊರಟಾಗ ನಂಗೆ ತೋಚಿದ ಕೆಲವು ವಿಚಾರಗಳನ್ನು ಇಲ್ಲಿ ಗೀಚಿದ್ದೀನಿ.

ಮಹಾಮಸ್ಥಾಭಿಷೇಕ ಹೇಗೆ ಶುರುವಾಯಿತು ಎಂಬುದಕ್ಕೆ ಪೌರಾಣಿಕ ಕಥೆ :--
ನಾನು ತಿಳಿದ ಪ್ರಕಾರ ಎಲ್ಲಿಯೂ ಬಾಹುಬಲಿ ತನಗೆ ಪೂಜೆ ಮಾಡಬೇಕು, ಅಭಿಷೇಕ ಮಾಡಬೇಕು ಎಂದು ಹೇಳಿಲ್ಲ. ಇದು ಅವರ ಅನುಯಾಯಿಗಳು ಬಾಹುಬಲಿಯ ಮೇಲಿನ ಭಕ್ತಿಗೆ ತಾವುಗಳೇ ರೂಢಿಸಿಕೊಂಡು ಬಂದಿರುವ ಪಧ್ಧತಿ ಇದು. ಬಾಹುಬಲಿ ಮೂರ್ತಿಯನ್ನು ಕೆತ್ತಿಸಿ ಪ್ರತಿಸ್ಥಾಪಿಸಿದ ನಂತರ ಚಾವುಂಡರಾಯನಿಗೆ ಅಹಂಕಾರ  ಆವರಿಸಿರುತ್ತೆ. ಅದನ್ನ ಹೋಗಲಾಡಿಸಲು ಆ ಊರಿನ ಗ್ರಾಮದೇವತೆ ಒಂದು ಅಜ್ಜಿಯ ರೂಪ ತಾಳಿ ಮೊದಲ ಬಾರಿಗೆ ತಾನೇ ಸ್ವತಹ  ಮಸ್ತಾಭಿಷೇಕ ಮಾಡುತ್ತಾಳೆ. ಆಗ ಆ ಅಜ್ಜಿಯ ಸಾಹಸ ನೋಡಿ ಅವನಿಗೆ ಆ ಅಜ್ಜಿಯ ಮುಂದೆ ತನ್ನ ಕೆಲಸ ತೃಣ ಎನಿಸಿ ಅಜ್ಜಿಗೆ  ತಲೆಬಾಗಿ ತನ್ನ ಅಹಂಕಾರವನ್ನು ತ್ಯಜಿಸುತ್ತಾನೆ.

ಮಹಾಮಸ್ಥಾಭಿಷೇಕ ಮಾಡಲು ವೈಜ್ಞಾನಿಕ ಕಾರಣ :--
ಈ ಬಾಹುಬಲಿ ಮೂರ್ತಿಯನ್ನು ಕೆತ್ತಿರುವುದು ಕಲ್ಲಿನಲ್ಲಿ. ಮೂರ್ತಿಯು ಹಾಳಾಗದಂತೆ ಇರಲು ರಕ್ಷಣೆ ಮಾಡುವ ಸಲುವಾಗಿ ಈ ಮಹಾಮಜ್ಜನ  ಶುರು ಮಾಡಿರಬಹುದು. ಬಯಲಿನಲ್ಲಿರುವ ಈ ಮೂರ್ತಿಗೆ ಬಿಸಿಲು , ಮಳೆಗಳಿಂದ ರಕ್ಷಣೆ ಇಲ್ಲ. ಆದಕಾರಣ ಮೂರ್ತಿ ವಿರೂಪಗೊಳಗಾಗಬಾರದು ಎಂದು ಕೂಡ ಈ ಮಸ್ತಾಭಿಷೇಕ ಮಾಡುತ್ತಿರಬಹುದು.

ಮಹಾಮಸ್ಥಾಭಿಷೆಕಕ್ಕೆ 12 ವರ್ಷಗಳೆ ಏಕೆ :--
1-  ಬಾಹುಬಲಿಯು ಜೀವನದಲ್ಲಿ ಎಲ್ಲವನ್ನು ತ್ಯಜಿಸಿ ನಿರಾಹಾರಿಯಾಗಿ 12 ತಿಂಗಳುಗಳ ಕಾಲ ತಪಸ್ಸಿಗೆ ನಿಲ್ಲುವನು. ಹಾಗೆ ಬಾಹುಬಲಿ ಮೂರ್ತಿ ತಯಾರಾಗಲು 12 ವರ್ಷಗಳ ಕಾಲದ ಗಡುವು ತೆಗೆದುಕೊಂಡಿತ್ತು. ಈ ಕಾರಣಗಳಿಂದ ಮಹಾಮಸ್ತಾಭಿಷೇಕ ನಡೆಸಲು 12 ವರ್ಷಗಳಿಗೊಮ್ಮೆ ನಡೆಸುವ ಪದ್ಧತಿ ಬಂದಿರಬಹುದು.
2-  ಮಹಾಮಸ್ತಾಭಿಷೇಕಕ್ಕೆ ಬಳಸುವಂಥಹ ವಸ್ತುಗಳನ್ನು ಪ್ರಪಂಚದ ವಿವಿಧ ಮೂಲೆಗಳಿಂದ ತರಿಸಲಾಗುತ್ತದೆ. ಅಲ್ಲಿ ಬಳಸುವ ಹರಿಶಿನ, ಕುಂಕುಮ ಗಂಧ ಇತ್ಯಾದಿ ಎಲ್ಲವು. ಅವುಗಳನ್ನು ಸಂಗ್ರಹಿಸಲು  ತುಂಬಾ ಸಮಯ ಹಿಡಿಯುತ್ತದೆ. ಅಲ್ಲಿ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸುವುದಿಲ್ಲ. ಮಜ್ಜನಕ್ಕೆ ಬೇಕಾಗುವ ಎಲ್ಲ ವಸ್ತುಗಳು ಗಿಡಮೂಲಿಕೆಗಳಿಂದ ತಯಾರಾದವು ಗಳಿಂದ ಮಹಾ ಮಜ್ಜನ ನಡೆಯುತ್ತದೆ. 
3-  ಅಸ್ಟು ದೊಡ್ಡ ಮೂರ್ತಿಗೆ ಎಲ್ಲ ವಸ್ತುಗಳನ್ನು ಜೋಡಿಸಿಕೊಂಡು  ಪ್ರತಿವರ್ಷ ಮಸ್ಥಾಭಿಶೀಕ ಮಾಡಲು ಬಹಳ ಖರ್ಚು ಆಗುವುದರಿಂದ ಮತ್ತು ಬಾಹುಬಲಿಯ ತಲೆಯ ಮೇಲಿನ ಎತ್ತರ ತಲುಪಲು ಅಟ್ಟ ಕಟ್ಟಲು ಬಹಳ ಸಮಯ ಹಿಡಿಯುತ್ತೆ ಅದು ಒಂದು ಕಾರಣ ವಿರಬಹುದು ಈ ಎಲ್ಲಾ ಕಾರಣಗಳಿಂದ 12 ವರ್ಷಕ್ಕೊಮ್ಮೆ ಮಹಾಮಸ್ಥಾಭಿಷೇಕ ನಿರ್ಧಾರವಾಗಿರಬಹುದು. 


ಅಚಲ ಬಾಹುಬಲಿ ಮೂರ್ತಿಯ ವಿಸ್ಮಯಗಳು  :--
ಬಾಹುಬಲಿ ಮೂರ್ತಿಯು ಸಾವಿರಾರು ವರ್ಷಗಳಿಂದ ಆಚಲವಾಗಿ ನಿಂತಿದೆ. ಬಿಸಿಲು, ಮಳೆ, ಗಾಳಿ, ಧೂಳು ಎನ್ನದೆ ಸ್ಥಿರವಾಗಿ ನಿಂತಿದೆ. ಆ ಮೂರ್ತಿಯ ಮೇಲೆ ಒಂದು ಸಣ್ಣ ಬಿರುಕು ಕೂಡ ಇಲ್ಲಿಯವರೆಗೂ ಆಗಿಲ್ಲ. ಇನ್ನೊಂದು ವಿಸ್ಮಯವೆಂದರೆ ಪಕ್ಷಿಗಳು ಕೂಡ ಈ ಶಿಲೆಯಮೇಲೆ ಕೂತು ಗಲೀಜು ಮಾಡುವುದಿಲ್ಲ. ಇದು ಕೂಡ ಆಶ್ಚರ್ಯ ಎನಿಸುತ್ತೆ.  ವಾಸ್ತವದಲ್ಲಿ ಇದು ಸುಳ್ಳು ಎನಿಸಿದರು ಇದು ಕಣ್ಣಿಗೆ ಕಾಣುವ ನಿತ್ಯ ಸತ್ಯ. 


ಬಾಹುಬಲಿ ಶಿಲಾಮೂರ್ತಿಯ ಇತಿಹಾಸ:--
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿರುವ ಶ್ರವಣಬೆಳಗೊಳ ಜೈನರ ಪವಿತ್ರ ಕ್ಷೇತ್ರ. ಇದನ್ನು ಜೈನರ ಕಾಶಿ ಎಂತಲೂ ಕರೆಯುವರು. ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿರುವ ಬಾಹುಬಲಿಯ ಏಕಶಿಲಾ ಮೂರ್ತಿಯನ್ನು ಕ್ರಿ.ಶ. 973 ರಲ್ಲಿ ಚಾವುಂಡರಾಯ ಎಂಬುವನು ಈ ಏಕಶಿಲಾ ವಿಗ್ರಹವನ್ನು ಕೆತ್ತಿಸಿದನು ಎಂದು ಶಿಲಾ ಶಾಸನಗಳಲ್ಲಿ ತಿಳಿದು ಬರುತ್ತದೆ. ಆದರೆ ಕೆಲವು ಸಾಹಿತ್ಯಗಳು ಬಾಹುಬಲಿ ಸಹೋದರ ಭರತನು ಕೆತ್ತಿಸಿದ ಎಂದು ಉಲ್ಲೇಖಿಸುತ್ತವೆ. ಈ ವಿಗ್ರಹವನ್ನು ಕೆತ್ತಿದ ವ್ಯಕ್ತಿ  ಒಂದುಕಡೆ  ಅರಿಷ್ಟನೇಮಿ ಎಂಬುವನು ಇದನ್ನು ಕೆತ್ತಿದನು ಎಂದು,  ಮತ್ತೊಂದು ಕಡೆ ತುಳುನಾಡಿನ ಪ್ರಸಿಧ್ಧ ಶಿಲ್ಪಿ ವೀರಶಂಭು ಕಲ್ಕುಡ ಕೆತ್ತಿದ್ದಾನೆ ಎಂದು ತಿಳಿದುಬರುತ್ತದೆ.

ಬೊಪ್ಪಣ ಕವಿಯ ಪದ್ಯದಲ್ಲಿ  ಬಾಹುಬಲಿಯ ಗುಣಗಳು :--

ಅನುಪಮ ರೂಪನೇ ಸ್ಮರನುದಗ್ರನೇನಿರ್ಜಿತಚಕ್ರಿ ಮತ್ತುದಾ

ರನೆ ನೆರೆಗೆಲ್ದು ಮಿತ್ತ ನಖಿಲೋರ್ವಿಯನತ್ಯಭಿಮಾನಿಯೇ ತಪಃ

ಸ್ಥನುಮೆರಡಂಘ್ರಿಯಿತ್ತೆಳೆಯೊಳಿರ್ದಪುದೆಂಬನನೂನಬೋಧನೇ

ವಿನಿಹತಕರ್ಮಬಂಧನೆನೆ ಬಾಹುಬಲೀಶನಿದೇನುದಾತ್ತನೋ



ಜೈನಧರ್ಮ ಮತ್ತು ಭರತ ಬಾಹುಬಲಿ :--

ಜೈನ ಧರ್ಮವನ್ನು ಸ್ಥಾಪಿಸಿದವರು  ವೃಷಭನಾಥರು. ಇವರಿಗೆ ಸುನಂದ ಮತ್ತು ನಂದಾ ಎನ್ನುವ ಇಬ್ಬರು ಹೆಂಡತಿಯರು ಮತ್ತು ನೂರುಜನ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳೂ ಜನಿಸಿದರು. ಈ  ಬಾಹುಬಲಿಯು ಸುನಂದೆಯ ಮಗ. ವೃಷಭನಾಥರಿಗೆ ಜೀವನದಲ್ಲಿ ವೈರಾಗ್ಯ ಉ೦ಟಾಗಿ ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳಿದರು. ಸಕಲ ಕರ್ಮಗಳನ್ನು ಜಯಿಸಿ ಕೇವಲಜ್ಞಾನವನ್ನು ಪಡೆದು ಜನರಿಗೆ ಮುಕ್ತಿ ಮಾರ್ಗವನ್ನು ಬೋಧಿಸುತ್ತಿದ್ದರು.

ಮೊದಲ ಮಗನಾದ  ಭರತನು ದಿಗ್ವಿಜಯವನ್ನು ಮುಗಿಸಿಬರುವಾಗ ಆತನ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ. ಭರತನು ತನ್ನ ತಮ್ಮ೦ದಿರನ್ನು ಜಯಿಸಿಲ್ಲವೆ೦ದು ಪುರೋಹಿತರು ಹೇಳಿದರು. ಅದಕ್ಕಾಗಿ ಭರತನು ತನ್ನ ಎಲ್ಲ ತಮ್ಮ೦ದಿರಿಗೆ ಕಾಣಿಕೆಗಳೊಡನೆ ಬರುವ೦ತೆ ಇಲ್ಲವೇ ಯುಧ್ಧಕ್ಕೆ ತಯಾರಾಗುವಂತೆ  ಹೇಳಿಕಳಿಸಿದಾಗ ಬಾಹುಬಲಿಯನ್ನು ಬಿಟ್ಟು  ಇತರರು ರಾಜ್ಯವನ್ನು ಭರತನಿಗೆ ಬಿಟ್ಟು ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆದರು. ಬಾಹುಬಲಿಯು ತ೦ದೆಯ ಹೊರತು ಇನ್ನಾರಿಗೂ ತಲೆ ಬಾಗುವುದಿಲ್ಲವೆ೦ದು, ತ೦ದೆಯಿ೦ದ ತನಗೆ ದೊರೆತ ರಾಜ್ಯವನ್ನು ಕೊಡುವುದಿಲ್ಲವೆ೦ದೂ, ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನೆ೦ದು  ಹೇಳಿದನು. ಭರತನು ಈ ಸುದ್ದಿಯನ್ನು ಕೇಳಿ ಯುದ್ಧಕ್ಕೆ ಸಿದ್ಧನಾದನು. ಎರಡೂ ಸ್ಯೆನ್ಯಗಳು ಯುದ್ಧ ಪ್ರಾರ೦ಭಿಸುವ ಮು೦ಚೆ ಮ೦ತ್ರಿಗಳು ಯೋಚಿಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿ೦ದ ವೃಥಾ ಸ್ಯೆನ್ಯ ನಾಶವಾಗುವುದಲ್ಲದೆ ಈ ಇಬ್ಬರಿಗೂ ಏನೂ ಆಗುವುದಿಲ್ಲ. ಆದ್ದರಿ೦ದ ಈ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು ತೀರ್ಮಾನಿಸಿದರು. ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವ೦ತೆ ನೀರೆರೆಚುವುದು ಜಲಯುದ್ಧ. ಪರಸ್ಪರ  ಜಟ್ಟಿಕಾಳಗವಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಮೇಲೆತ್ತಿದ ಬಾಹುಬಲಿಗೆ ತಾನು ಹೀಗೆ ಮಾಡಬಾರದೆ೦ದೆನಿಸಿ ನಿಧಾನವಾಗಿ ಕೆಳಗಿಳಿಸಿದನು. ಇದರಿಂದ ಅವಮಾನ ಹೊ೦ದಿದ ಭರತನು ತನ್ನ ಚಕ್ರವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಯ ಪ್ರದಕ್ಷಿಣೆ ಮಾಡಿ ಅವನ ಬಲಗಡೆನಿ೦ತಿತು. ಬಾಹುಬಲಿ ವಿಜಯಿಯಾದನು. ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿಗೆ ವೈರಾಗ್ಯ ಉ೦ಟಾಗಿ ರಾಜ್ಯವನ್ನು ತೊರೆದು ತ೦ದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿಗೆ ತೊಡಗಿದನು. ಬಹುಕಾಲ ತಪಸ್ಸು ಆಚರಿಸಿದರೂ ಕೇವಲಜ್ಞಾನವನ್ನು ಪಡೆಯಲಿಲ್ಲ. ಇದಕ್ಕೆ ತಾನು ಅಣ್ಣನ ಭೂಮಿಯಲ್ಲಿ ನಿ೦ತಿರುವೆನೆ೦ಬ ಚಿ೦ತೆಯೇ ಕಾರಣವಾಗಿತ್ತು. ಇದನ್ನು ತಿಳಿದ ನಂತರ ಭರತನು ಬ೦ದು ಈ ಭೂಮಿಯನ್ನು ನೀನು ಗೆದ್ದು ನನಗೆ ಕೊಟ್ಟಿರುವೆ ಆದ್ದರಿ೦ದ ಮನದಲ್ಲಿ ಈ ಭಾವನೆ ತೊರೆದು ಬಿಡು ಎಂದು ಬೇಡಿದನು. ನಂತರ ಬಾಹುಬಲಿಯು ನಿರ್ಮಲವಾದ ಮನದಿ೦ದ ತಪಸ್ಸನ್ನು ಮಾಡಿ ಕೇವಲಜ್ಞಾನ ಪಡೆದನು.

No comments:

Post a Comment