Wednesday 11 October 2017

ದೀಪಾವಳಿ ಬಗೆಗಿನ ಪೌರಾಣಿಕ ಹಿನ್ನೆಲೆ ಮತ್ತು ಜನಪದ ಕಥೆಗಳು

ಭಾರತೀಯರಿಗೆ ಹಬ್ಬಗಳನ್ನ  ಆಚರಿಸುವುದೆಂದರೆ ಎಲ್ಲಿಲ್ಲದ ಸಡಗರ. ಬಹುಶಃ ಭಾರತದಲ್ಲಿ ಆಚರಿಸುವಷ್ಟು  ಹಬ್ಬಗಳು ಬೇರೆ ಯಾವ ದೇಶಗಳಲ್ಲೂ ಇಲ್ಲ ಅಂತ ಅನ್ನಿಸುತ್ತೆ.   ಈ ಹಬ್ಬಗಳನ್ನ ಮಾಡುವ  ಮೂಲಕ  ದುಡಿತದ ಜಂಜಾಟದಿಂದ ಒಂದಷ್ಟು ನೆಮ್ಮದಿಯನ್ನು ಕಾಣಬಯಸುತ್ತಾರೆ. ಬಂಧುಗಳು- ಗೆಳೆಯರೊಂದಿಗೆ ಸಂಭ್ರಮ ಆಚರಿಸಿ ಖುಷಿಯಿಂದ  ಕಾಲ  ಕಳೆಯುತ್ತಾರೆ. ಅಂತಹ ಹಬ್ಬಗಳಲ್ಲಿ ದೀಪಾವಳಿಯು ಒಂದು. ಪ್ರತಿಯೊಬ್ಬ ಭಾರತೀಯರೂ ದೀಪಾವಳಿಯ ಹಬ್ಬದ ಸಡಗರದಲ್ಲಿ ತೇಲುತ್ತಾರೆ. ದೀಪಾವಳಿ ಹಬ್ಬವನ್ನು ಪ್ರಪಂಚದಲ್ಲಿ ಯಾವ ಮೂಲೆಯಲ್ಲಿದ್ದರೂ ಬಹಳ ಸಂತೋಷ ಸಡಗರದಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬ ಬಂತೆಂದರೆ ಎಲ್ಲರಿಗೂ ಖುಷಿಯೋ ಖುಷಿ. ಅದರಲ್ಲಿ ಪ್ರಮುಖವಾಗಿ ಮಕ್ಕಳಿಗೆ, ಹೊಸ ಬಟ್ಟೆಗಳನ್ನು ತೊಟ್ಟು, ಸಿಹಿತಿಂಡಿಗಳನ್ನು ಹಂಚಿ, ಪಟಾಕಿಗಳನ್ನು ಸಿಡಿಸಿ ಬಹಳ ವಿಜೃಂಭಣೆಯಿಂದ ಈ ಹಬ್ಬ ಆಚರಿಸುತ್ತಾರೆ.

  ಅಂತರ್ಜಾಲ ಸಂಗ್ರಹ 


ಯಾವುದೇ ಹಬ್ಬವಾದರೂ ಅದಕ್ಕೆ ಒಂದು ಬಲವಾದ  ಪೌರಾಣಿಕ ಹಿನ್ನೆಲೆ ಇಲ್ಲವೇ ಜನಪದ ನಂಬಿಕೆಗಳು ಬಲವಾಗಿ ಪ್ರಭಾವ  ಬೀರಿರುತ್ತವೆ.  ಹಾಗೆ ನಾನು ದೀಪಾವಳಿ ಹಬ್ಬದ ಬಗ್ಗೆ  ಕೇಳಿ ಮತ್ತು ಓದಿ  ತಿಳಿದುಕೊಂಡ  ಕೆಲವು ಕಥೆಗಳನ್ನ ಇಲ್ಲಿ ಕಲೆಹಾಕುವ ಪ್ರಯತ್ನ ಮಾಡಿದ್ದೇನೆ. ಸದ್ಯಕ್ಕೆ ಗೊತ್ತಿರುವ ಎರೆಡು ಕಥೆಗಳು ಇಲ್ಲಿವೆ.


ಪೌರಾಣಿಕ ಹಿನ್ನೆಲೆ :-  ನರಕ ಚತುರ್ದಶಿಯ ಎರಡನೇ ದಿವಸ ಬಲಿಪಾಡ್ಯಮಿ.  ಇದರ ಪೌರಾಣಿಕ ಹಿನ್ನೆಲೆಯು ಹೀಗಿದೆ.
  ಅಂತರ್ಜಾಲ ಸಂಗ್ರಹ 
ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದನು ಮಹಾ ವಿಷ್ಣುಭಕ್ತನಾಗಿದ್ದ. ಆತನ ಮಗ ವಿರೋಚನ ಈ  ವಿರೋಚನನ ಮಗನೇ ಬಲಿಚಕ್ರವರ್ತಿ. ಈತನು ಕೂಡಾ ವಿಷ್ಣುಭಕ್ತನೇ ಆದರೆ ರಾಕ್ಷಸ ವಂಶದಲ್ಲಿ ಹುಟ್ಟಿದವನಾದ್ದರಿಂದ  ಪ್ರವೃತ್ತಿಯನ್ನು ಬಿಡುತ್ತಿರಲಿಲ್ಲ. ಈತನ ರಾಜ್ಯವು ತುಂಬಾ ಸಮೃದ್ಧಿಯಿಂದ ಕೂಡಿತ್ತು.  ಋಷಿಗಳ ತಪಸ್ಸಿಗೆ ತಪೋಭಂಗ ಮಾಡುತ್ತಿದ್ದನು. ಯಜ್ಞಯಾಗಾದಿಗಳಿಗೆ ಅಡ್ಡಿಮಾಡುತ್ತಿದ್ದನು.  ಈತನನ್ನು ಸಂಹಾರಮಾಡಬೇಕೆಂದು   ಋಷಿಗಳು ವಿಷ್ಣುವಿನಲ್ಲಿ ಕೇಳಿಕೊಂಡರು.  ಹೋರಾಟ ನಡೆಸಿ ಆತನನ್ನು ಮಟ್ಟ ಹಾಕುವುದು ಕಷ್ಟ ಸಾಧ್ಯವಾಗಿತ್ತು.

ದಾನ ಮಾಡುವುದರಲ್ಲೂ ಎತ್ತಿದ ಕೈ ಈ ಬಳಿ ಚಕ್ರವರ್ತಿಯಾದಾಗಿತ್ತು. ಅದೇ  ಬಲಿಚಕ್ರವರ್ತಿಗೆ ಉರುಳಾಗಿ ಪರಿಣಮಿಸಿತು.  ಒಮ್ಮೆ ಅಶ್ವಮೇಧಯಾಗ ಮಾಡಬೇಕೆಂಬ ಆಲೋಚನೆ ಮಾಡುತ್ತಾನೆ . ಈ ಯಾಗ ಮಾಡುವಾಗ ಯಾರೇ ಏನೇ ಬೇಡಿದರೂ  ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡಬೇಕೆಂಬ ನಿರ್ಧಾರವನ್ನು ಕೈಗೊಂಡನು.

ಶುಕ್ರಾಚಾರ್ಯ  ಋಷಿಮುನಿಯು  ಈತನಿಗೆ ಈ ಕೆಲಸ ಮಾಡಬೇಡ ಎಂಬುದಾಗಿ ಸಲಹೆಯಿತ್ತನು. ಆದರೆ ಋಷಿಮುನಿಯ ಈ ಮಾತಿಗೆ ಬಲಿಚಕ್ರವರ್ತಿ ಬೆಲೆ ಕೊಡಲಿಲ್ಲ. ಅಶ್ವಮೇಧ ಯಾಗ ನಡೆಯಿತು. ಬಂದವರಿಗೆಲ್ಲಾ ದಾನ ಕೊಡಲಾರಂಭಿಸಿದ ಇದೇ ಸಮಯದಲ್ಲಿ ಬಲಿಚಕ್ರವರ್ತಿಯನ್ನು ಸಂಹಾರ ಮಾಡಲು ಸರಿಯಾದ  ಸಮಯವೆಂದು ಭಾವಿಸಿದ ವಿಷ್ಣುವು, ವಾಮನ ರೂಪವನ್ನು ತಾಳಿ ಬಳಿ ಚಕ್ರವರ್ತಿ ಯಾಗ ನಡೆಸುತ್ತಿರುವ  ಸ್ಥಳಕ್ಕೆ ಬಂದನು. ಬಂದವನೇ ತನಗೆ ದಾನ ನೀಡಬೇಕೆಂದು ಕೇಳಿಕೊಂಡನು.

ದಾನ ನೀಡುವ ಮೊದಲು ಸಂಪ್ರೋಕ್ಷಣೆ ಬಿಡುವ ಪದ್ಧತಿಯಿದೆ. ಅಂದರೆ ತಮ್ಮ ಕಮಂಡಲದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ದಾನ ಕೊಡುವವರ ಕೈಗೆ ಹಾಕಲಾಗುವುದು. ಈ ಸಮಯದಲ್ಲಿ ಶುಕ್ರಾಚಾರ್ಯರು ಬಲಿಚಕ್ರವರ್ತಿಯನ್ನು ಉಳಿಸುವ ಸಲುವಾಗಿ ಕಪ್ಪೆರೂಪ ತಾಳಿ ಕಮಂಡಲದ ರಂಧ್ರದಲ್ಲಿ ಸೇರಿಕೊಂಡರು. ಹಾಗಾಗಿ ಸಂಪ್ರೋಕ್ಷಣೆ ಮಾಡಬೇಕಾದರೆ ನೀರು ಬೀಳುತ್ತಿರಲಿಲ್ಲ.ಶುಕ್ರಾಚಾರ್ಯರ ಕುಯುಕ್ತಿಯನ್ನು ಅರಿತ ವಿಷ್ಣು ಪರಮಾತ್ಮ ದರ್ಭೆಯನ್ನು ತೆಗೆದುಕೊಂಡು ಬಲಿಚಕ್ರವರ್ತಿಯಲ್ಲಿ ಏನೋ ಕಸ ಸಿಕ್ಕಿಕೊಂಡಂತಿದೆ ಅದನ್ನು ತೆಗೆಯುತ್ತೇನೆ ಎಂದು ಕಮಂಡಲದ ನಾಳಕ್ಕೆ ಚುಚ್ಚಿದನು. ಅದು ಕಪ್ಪೆಯ ಕಣ್ಣನ್ನು ಚುಚ್ಚಿತು. ಹೀಗಾಗಿ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು. ನಂತರಸಂಪ್ರೋಕ್ಷಣೆ ಸರಾಗವಾಗಿ ನೆರವೇರಿತು. ಮುಂದೆ ಬಲಿಚಕ್ರವರ್ತಿ ತಮಗೇನು ನೀಡಬೇಕೆಂದು ವಾಮನನಲ್ಲಿ ಕೇಳಿಕೊಂಡನು. ಆಗ ವಾಮನನು ನನಗೆ ಮೂರು ಹೆಜ್ಜೆ ಜಾಗ ನೀಡಿದರೆ ಸಾಕು ಎಂದು ಹೇಳುತ್ತಾನೆ.   ಸರಿ ಎಂದು ಬಲಿಚಕ್ರವರ್ತಿ ನಿನ್ನ ಜಾಗವನ್ನು ತೆಗೆದುಕೋ ಎಂದು ಹೇಳುತ್ತಾನೆ.

ವಾಮನನ ರೂಪದಲ್ಲಿದ್ದ ವಿಷ್ಣುವು ತ್ರಿವಿಕ್ರಮನ ರೂಪ ತಾಳಿ ದೊಡ್ಡ ಆಕಾರವಾಗಿ ಎದ್ದು ನಿಲ್ಲುತ್ತಾನೆ. ತ್ರಿವಿಕ್ರಮನ ಒಂದನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು. ಎರಡನೇ ಹೆಜ್ಜೆಯನ್ನು ಆಕಾಶದ ಮೇಲಿಟ್ಟನು. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ಬೇರೇನೂ ತೋಚದ ಬಲಿ, ತನ್ನ ತಲೆಯ ಮೇಲೆ ಇಡುವಂತೆ ಕೇಳಿಕೊಂಡನು. ಮೂರನೇ ಹೆಜ್ಜೆಯನ್ನು ಆತನ ತಲೆಮೇಲಿಟ್ಟು ತ್ರಿವಿಕ್ರಮನು ಬಲಿಚಕ್ರವರ್ತಿಯನ್ನು ಪಾತಾಳಲೋಕಕ್ಕೆ ತಳ್ಳಿದನು.

ಆ ಸಮಯದಲ್ಲಿ ಬಲಿ ಚಕ್ರವರ್ತಿಯಲ್ಲಿ ವಾಮನನು ಯಾವುದಾದರೊಂದು ವರವನ್ನು ಕೇಳೆಂದಾಗ ಬಲಿಚಕ್ರವರ್ತಿಯು ಪ್ರತಿವರ್ಷವು  ತಾನು ಭೂಮಿಗೆ ಆಗಮಿಸಿಬೇಕೆಂದು, ಭೂಮಿಯಲ್ಲಿ ತನ್ನ ನೆನಪಿಗಾಗಿ ಆ ದಿನವನ್ನು ಆಚರಿಸಬೇಕು ಎಂಬುದಾಗಿ ಕೇಳಿದನು. ಅಲ್ಲದೆ, ಆ ದಿನವು ತನ್ನ ಸಾಮ್ರಾಜ್ಯದಲ್ಲಿರುವಂತೆಯೇ, ಸರ್ವ ಸಮೃದ್ಧಿ ಪರಿಪಾಲನೆಯಿಂದ ಕೂಡಿರಬೇಕೆಂದು ಆಶಿಸಿದನು.ಅದರಂತೆ  ಬಲಿಚಕ್ರವರ್ತಿಗೆ ವಿಷ್ಣುವು ಒಂದು ವರ ನೀಡುತ್ತಾನೆ.  ಅದೇನೆಂದರೆ ಆಶ್ವೀಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜಿಸುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಅದರಂತೆಯೇ, ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ, ಇವುಗಳನ್ನು ಮಾಡಲಾಗುವುದು. ಯಾಕೆಂದರೆ, ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.ಸರ್ವಸಮೃದ್ಧಿಯುಂಟಾಗಿ, ಧನ-ಕನಕಗಳು ವೃದ್ಧಿಯಾಗುವಂತೆ ಇದೇ ದಿನ ಧನಲಕ್ಷ್ಮಿ ಪೂಜೆಯ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಾಡುವುದರಿಂದ ಬಲಿ ಚಕ್ರವರ್ತಿಯ ರಾಜ್ಯದಲ್ಲಿದ್ದಂತೆ ಎಲ್ಲಾ ಸುಖೋಪಭೋಗಗಳು ದೊರೆಯುವುದು ಎಂಬ ನಂಬಿಕೆ ಜನರಲ್ಲಿದೆ.

ದೀಪಾವಳಿ ಬಗೆಗಿನ ಜಾನಪದ ಕಥೆ :-
ಒಂದೂರಲ್ಲಿ ಒಬ್ಬ  ಅರಸನಿದ್ದ.  ಅವನಿಗೆ ಏಳು ಮಂದಿ ಹೆಣ್ಣುಮಕ್ಕಳು. ಅವರಲ್ಲಿ ಕೊನೆಯ ಮಗಳೆಂದರೆ ಅವನಿಗೆ ತುಂಬಾ ಮುದ್ದು. ಒಂದು  ದಿನ, ತನ್ನ ಹೆಣ್ಣು ಮಕ್ಕಳನ್ನು ಕರೆದು, ತನಗೆ ಗಂಡುಮಕ್ಕಳಿಲ್ಲದ  ಕಾರಣ, ನಿಮ್ಮ ನಿಮ್ಮ ಜೀವನದ ಗುರಿಯು ತಾನು ಹೇಳುವ ರೀತಿ ರಾಜ್ಯಭಾರ ಮಾಡಬೇಕು ಎಂದು ಹೇಳಿ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ವಹಿಸುತ್ತಾಬರುತ್ತಾನೆ. ಎಲ್ಲರು ತನ್ನ ತಂದೆಯ ಆಸೆಯಂತೆ ನಡೆದುಕೊಳ್ಳಲು ಒಪ್ಪಿಗೆ ನೀಡುತ್ತಾರೆ. ಆದರೆ ಚಿಕ್ಕ ಮಗಳು ಮಾತ್ರ ತಾನು  ನನ್ನದೇ ಆದ ಗುರಿಯೊಂದಿಗೆ ನಾನು ಹುಟ್ಟಿದ್ದೇನೆ ತನಗೆ ಯಾವ ಜವಾಬ್ದಾರಿಯನ್ನು ಹೇರಬಾರದು ಎಂದು ಹೇಳುತ್ತಾಳೆ. ಇದರಿಂದ ಸಿಟ್ಟಾದ ಆ ಅರಸ  ಆಕೆಯನ್ನು ಒಬ್ಬ ಭಿಕ್ಷುಕನಿಗೆ ಮದುವೆ ಮಾಡಿ ಅರಮನೆಯಿಂದ ಹೊರಗೆ ಕಳುಹಿಸಿದ. ಆದರೂ, ಎಷ್ಟಾದರೂ ಪ್ರೀತಿಯ ಮಗಳಲ್ಲವೇ? ಪಿತೃಪ್ರೇಮದಿಂದಾಗಿ ತನ್ನ ತಪ್ಪಿನ ಅರಿವಾಗಿ ಮಗಳಿಗೆ  ಒಂದು ವರವನ್ನು ಬೇಡುವಂತೆ ಕೇಳಿದ. ಇದಕ್ಕೆ ಅವಳು ಕೇಳಿದ್ದೇನೆಂದರೆ, ಕಾರ್ತಿಕ ಅಮಾವಾಸ್ಯೆಯ ರಾತ್ರಿಯಂದು ಆತನ ಇಡೀ  ಸಾಮ್ರಾಜ್ಯವು ಕತ್ತಲಲ್ಲಿ ಇರಬೇಕೆಂಬ ವಿಚಿತ್ರ ಬೇಡಿಕೆಯನ್ನ ಇಡುತ್ತಾಳೆ.  ಇದಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿದ ರಾಜ.  ಕಾರ್ತಿಕ ಅಮಾವಾಸ್ಯೆಯ ಒಂದು ದಿನ  ತನ್ನ ರಾಜ್ಯದ ಜನತೆಗೆ ಮನೆಯಲ್ಲಿ ದೀಪಗಳನ್ನ ಹಚ್ಚದಂತೆ ಆಜ್ಞೆ ಹೊರಡಿಸುತ್ತಾನೆ. ಆ ದಿನ ಆ ಕೊನೆಯ ಮಗಳು ಮಾತ್ರ ಕಗ್ಗತ್ತಲಲ್ಲಿ  ಕಾಡಿನಲ್ಲಿರುವ ತನ್ನ ಗುಡಿಸಲಿನಲ್ಲಿ ಹಣತೆ ಉರಿಸಿದಳು. ಅವತ್ತು  ಆ ದೀಪವನ್ನು ಗಮನಿಸಿ  ಲಕ್ಷ್ಮೀದೇವಿಯು  ಆಕೆಯ ಮನೆಗೆ ಬಂದು. ಆ  ರಾತ್ರಿ ಆಶ್ರಯವನ್ನು ಕೇಳುತ್ತಾಳೆ. ಆಗ ಆ ಭಿಕ್ಷುಕನ ಹೆಂಡತಿಯಾಗಿದ್ದ ಕೊನೆ ಮಗಳು ಲಕ್ಷ್ಮಿಗೆ  ಮರಳಿ ಹೋಗದಂತಿದ್ದರೆ ಮಾತ್ರವೇ ಮನೆಯೊಳಗೆ ಬರಮಾಡಿಕೊಳ್ಳುವುದಾಗಿ  ಶರತ್ತು ಹಾಕಿದಳು. ಇದೇ ದಿನವನ್ನು ದೀಪಾವಳಿ ಅಮಾವಾಸ್ಯೆಯಲ್ಲಿ  ಶ್ರೀ ಲಕ್ಷ್ಮೀಯ ಪೂಜೆ ಆಚರಿಸಲಾಗುತ್ತದೆ.






1 comment:

  1. Steel Frame HD, TFT, Focal-Optics, Focal-Optics, Focal-Optics
    This is a solid does titanium set off metal detectors 3D model of the new Focal ray ban titanium Lens by everquest titanium Steel Frame - TFT in the The first pair titanium for sale is designed titanium septum ring to mimic the original Focal Lens by

    ReplyDelete