Thursday 5 October 2017

ಸೀಗೆ ಹುಣ್ಣಿಮೆ

ನಮ್ಮ ಸಂಪ್ರದಾಯದಲ್ಲಿ ಎಲ್ಲ ಅಮಾವಾಸ್ಯೆ ಮತ್ತು ಹುಣ್ಣಿಮೆಗಳಿಗೆ ಅದರದೇ  ಆದ  ಹೆಸರು ಮತ್ತು ವಿಶೇಷತೆಗಳಿವೆ. ಅವುಗಳಿಗೆ  ಪ್ರಕೃತಿಯಯಲ್ಲಾಗುವ ಬದಲಾವಣೆಗಳ ಜೊತೆ- ಜೊತೆಗೆ ವಿಶೇಷತೆಗಳು ಕೂಡ ಅಂಟಿಕೊಂಡು ಬಂದಿರಬಹುದು ಎಂದು ನಾವು ಅಂದುಕೊಳ್ಳಬಹುದು.


ನಾವುಗಳು ಆಚರಿಸುವ  ಹುಣ್ಣಿಮೆಗಳು ಈ ರೀತಿ ಇವೆ. ಬನದ ಹುಣ್ಣಿಮೆ, ಭರತ ಹುಣ್ಣಿಮೆ, ಹೋಳಿ ಹುಣ್ಣಿಮೆ, ದವನದ ಹುಣ್ಣಿಮೆ, ಆಗಿ ಹುಣ್ಣಿಮೆ(ಅಧಿಕ) ಕಾರಹುಣ್ಣಿಮೆ, ಕಡ್ಲಿ ಕಡುಬು ಹುಣ್ಣಿಮೆ [ಗುರುಪೂರ್ಣಿಮಾ], ನೂಲ ಹುಣ್ಣಿಮೆ, ಅನಂತ ಹುಣ್ಣಿಮೆ, ಸೀಗೆ ಹುಣ್ಣಿಮೆ, ಗೌರಿ ಹುಣ್ಣಿಮೆ, ಹೊಸ್ತಿಲ ಹುಣ್ಣಿಮೆ.


ಇವತ್ತು ಸೀಗೆ ಹುಣ್ಣಿಮೆ. ಇವತ್ತಿನ ಸೀಗೆ ಹುಣ್ಣಿಮೆಯೂ  ಕೂಡ ಕೆಲವೊಂದು ವಿಶೇಷತೆಯನ್ನು ಹೊಂದಿದೆ. ಇಂದು ಪ್ರತಿ ಹಳ್ಳಿಗಳಲ್ಲಿ ರೈತರು ತಮ್ಮ ಹೊಲ, ಗದ್ದೆಗಳಲ್ಲಿ, ತೋಟಗಳಲ್ಲಿ ಈ ಸೀಗೆ ಹುಣ್ಣಿಮೆಯ  ಹಬ್ಬವನ್ನಾಚರಿಸುತ್ತಾರೆ.  ಈ ಸೀಗೆ ಹುಣ್ಣಿಮೆಯನ್ನು ಭೂ ತಾಯಿಯ ಸೀಮಂತ ಎಂದು ಕೂಡ ಕರೆಯುವುದುಂಟು.

 ಈ ಸೀಗೆ ಹುಣ್ಣಿಮೆ ಸಮಯದಲ್ಲಿ ಭತ್ತ , ಅಡಿಕೆ, ರಾಗಿ , ಜೋಳ  ಇನ್ನು ಅನೇಕ ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ಕಾಳುಗಟ್ಟಿ, ತೆನೆ ತುಂಬಿ, ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತವೆ. ಭೂಮಿ ತಾಯಿ ಯನ್ನ ಹೆಣ್ಣಿಗೆ ಹೋಲಿಸಿ ಹೊಲಗಳಲ್ಲಿನ ಬೆಳೆ ತುಂಬಿಕೊಡಿರುವುದರಿಂದ ಆಕೆ ಗರ್ಭ ಕಟ್ಟಿದ ಹೆಣ್ಣು ಎಂದು ಕಲ್ಪಿಸಿಕೊಂಡು ಆಕೆಗೆ ಸೀಮಂತ  ಮಾಡುವ ರೀತಿ ಈ ಸೀಗೆ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ.

ಈ ಸೀಗೆ ಹುಣ್ಣಿಮೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ನನಗೆ ತಿಳಿದ ಮಟ್ಟಿಗೆ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಪೈರು ಚೆನ್ನಾಗಿ ಬರಲೆಂದು  ಹೊಲಗಳಿಗೆ ಪೂಜೆ ಸಲ್ಲಿಸುತ್ತಾರೆ. ತಮ್ಮ ಜಾನುವಾರಗಳಿಗೆ ಪೂಜೆ ಮಾಡುತ್ತಾರೆ. ಹೊಲಗಳ ನಾಲ್ಕು ದಿಕ್ಕುಗಳಲ್ಲಿ ಚರಗ ಚೆಲ್ಲುತ್ತಾರೆ. ಎತ್ತಿನ ಸಗಣಿಯಿಂದ 5 ಉಂಡೆಗಳನ್ನು ಮಾಡಿ ಅದಕ್ಕೆ ಹೂವುಗಳನ್ನ ಸಿಕ್ಕಿಸಿ ಪಾಂಡವರು ಎಂದು ಪೂಜಿಸುತ್ತಾರೆ. ಕೆಲವು ಮುತ್ತೈದೆಯರಿಗೆ ಉಡಿ ತುಂಬುತ್ತಾರೆ.ತುಂಬುತ್ತಾರೆ. ಹೊಲ ಗದ್ದೆಗಳಲ್ಲಿ ತಮ್ಮ ಕುಟುಂಬದವರ ಮತ್ತು ಬಂಧು ಬಾಂಧವರುಗಳ  ಜೊತೆ ಕೂಡಿ ಕುಳಿತು ಊಟ ಮಾಡುತ್ತಾರೆ.

1 comment:

  1. 12 ಅಮಾವಾಸ್ಯೆಗಳ ಹೆಸರು ಸಿಕ್ಕಿದ್ರೆ ಹಾಕಿ

    ReplyDelete