Thursday 20 July 2017

ಸಾಮಾನ್ಯ ವ್ಯಕ್ತಿ ನಾಯಕನಾದಾಗ - ಒಂದು ಮೊಟ್ಟೆಯ ಕಥೆ

ಇತ್ತೀಚಿನ ಸಿನೆಮಾಗಳನ್ನ ನೋಡಿದಾಗ ಫೇಮಸ್ ನಾಯಕ , ಫೇಮಸ್ ನಾಯಕ ನಟಿ, ಅದ್ದೂರಿ ಸೆಟ್, ಅವಾಚ್ಯ ಮಾತುಗಳು ,ಹೊಡೆದಾಟ ಬಡಿದಾಟಗಳು , ಚಾಕು, ಚೂರಿ, ಮಚ್ಚು, ಕತ್ತಿ, ರಕ್ತ, ಇವುಗಳು ಇದ್ರೆ  ಒಳ್ಳೆ ಸಿನಿಮಾ ಮಾಡಬಹುದು.  ಜನರ ಮನಸ್ಸನ್ನ ಗೆಲ್ಲಬಹುದು  ಅನ್ನೋ  ಜನ ಒಂದು ಕಡೆಯಾದ್ರೆ. ಇನ್ನು ಕೆಲವರು ಇತ್ತೀಚಿನ ದಿನಗಳಲ್ಲಿ ಹಣ ಗಳಿಸುವ ಭರ ಮತ್ತು ಜನರ ಮನಸ್ನಲ್ಲಿ ನಾವು ಸದಾ ಇರಬೇಕು ಅನ್ನೋ ಆಸೆ. ಒಳ್ಳೆ ರೀತಿಯಲೋ  ಅಥವಾ ಕೆಟ್ಟ ರೀತಿಯಲೋ ಒಟ್ಟು ಪ್ರಚಾರದಲ್ಲಿ ಇರಬೇಕು ಅನ್ನೋ ಮನೋಭಾವನೆ ಈಗ ಚಿತ್ರರಂಗದಲ್ಲಿ ಇದೆ. ಒಟ್ಟಿನಲ್ಲಿ ಜನ ಅವರುಗಳ ಬಗ್ಗೆ ಮಾತಾಡಿಕೊಳ್ಳುತ್ತಾನೆಯೇ ಇರಬೇಕು ಅದಕ್ಕೋಸ್ಕರ ಎಂಥಾ ಚೀಪ್ ಗಿಮಿಕ್ ಮಾಡೋಕು ರೆಡಿ ಇರ್ತಾರೆ ಕೆಲವರು. ಅಂತಹುದರಲ್ಲಿ  ಯಾವುದೇ ಅತಿರೇಕಗಳನ್ನ ಮಾಡದೇ ಸರಳ ಸುಂದರ ಸಿನೆಮಾ ಮಾಡಿ ಗೆದ್ದಿದೆ.  ರಾಜ್ ಕುಮಾರ್ ರವರನ್ನು ಆದರ್ಶವಾಗಿಟ್ಟು ಕೊಂಡು ಬದುಕುವ ಮೊಟ್ಟೆ ತಲೆಯ ವ್ಯಕ್ತಿ ಜೀವನ ಸುಂದರವಾಗಿ ಮೂಡಿಬಂದಿದೆ.  



ಈ ಭಾನುವಾರ ನಾ ನೋಡಿದ ಸಿನೆಮಾ ಒಂದು ಮೊಟ್ಟೆಯ ಕಥೆ . ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಿರುವಂತ ಅತಿರೇಕಗಳು ಈ ಚಿತ್ರದಲ್ಲಿ ಇಲ್ಲ. ಅಂದ್ರೆ  ನಾಯಕ - ಖಳ ನಾಯಕರ ಹೊಡೆದಾಟ ಬಡಿದಾಟವಿಲ್ಲದ, ನಾಯಕಿಯರ ದೇಹಪ್ರದರ್ಶನವಿಲ್ಲ, ನಿಜವಾದ ಸೌಂದರ್ಯ ಅಂದ್ರೆ ಏನು ಎಂದು ತಿಳಿಸಿದ ಚಿತ್ರ, ಸಹ ನಟ - ನಟಿಯರನ್ನು ಹೊಡೆದು, ಬಡಿದು , ತಳ್ಳಿ  ತಮಾಷೆ ಮಾಡದೇ ನಗು ತರಿಸಿದ ಚಿತ್ರ . ಅತಿರೇಕ ಎನ್ನೋ ಸೆಂಟಿಮೆಂಟ್ ಡೈಲಾಗ್ ಇಲ್ಲದೆ ಕಣ್ಣಂಚಲ್ಲಿ ನೀರು ಜಿನುಗಿಸುತ್ತೆ. ಇದು ಅಂತ ನನಗೆ ಅನ್ನಿಸ್ತು.

ಇದು ಸಾಮಾನ್ಯ ಜನ ಜೀವನದಲ್ಲಿ ನಡೆಯುವ ಸತ್ಯ ಸಂಗತಿಗಳನ್ನ ತೆರೆ ಮೇಲೆ ಆಡಂಬರವಿಲ್ಲದೆ ಸರಳವಾಗಿ ನೈಜತೆಯಿಂದ ಚಿತ್ರಿಸಿರುವ ಸಿನೆಮಾ ಇದಾಗಿದೆ. ಜನಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಈ ಮೊಟ್ಟೆಯ ಕಥೆಯ ನಾಯಕ.  ಅವರವರ ಜೀವನಕ್ಕೆ ಅವರೇ ನಾಯಕ ನಾಯಕಿಯರು ಅಲ್ವ? ಹಾಗೆ ಒಬ್ಬ ಮೊಟ್ಟೆ ತಲೆಯ ವ್ಯಕ್ತಿ ಯೊಬ್ಬನ ಜೀವನವನ್ನ ಕೇಂದ್ರವಾಗಿಟ್ಟು ಮೂಡಿಬಂದಿರುವ ಸಿನೆಮಾ ಇದು. ಆತನಿಗೆ ತನ್ನ ಬೋಳು ತಲೆಯಿಂದ ಪ್ರತಿದಿನ ಆಗುವ ಅವಮಾನಗಳು.  ಮದುವೆಯಾಗುವ ಹುಡುಗಿಯರು ಆತನನ್ನು ರಿಜೆಕ್ಟ್ ಮಾಡಿದರೂ,,, ಈ ಬಾರಿ ಮದುವೆ  ಸಂಬಂಧ ಏನಾಯ್ತು? ಅಂತ ಯಾರಾದ್ರೂ ಕೇಳಿದ್ರೆ.  ಆತ ತಾನೇ ರಿಜೆಕ್ಟ್ ಮಾಡಿದೆ ಅನ್ನೋ ಸುಳ್ಳು ಸ್ವಾಭಿಮಾನದ ಮಾತು. ಸಮಯ ಸಂದರ್ಭಕ್ಕೆ ಸರಿಯಾಗಿ ಬರುವ ಅಣ್ಣಾವ್ರ ಹಾಡುಗಳು ಪ್ರತಿಬಾರಿ ನಗು ಬರಿಸುತ್ತವೆ . 


ತನ್ನ ಎದುರಿರುವ ಎಕನಾಮಿಕ್ಸ್ ಲೇಡಿ ಲೆಕ್ಚರ್ಳನ್ನು  ಇಷ್ಟ ಪಡುತ್ತಾನೆ. ನಂತ್ರ ಅವಳು ಕಾಲೇಜಗೆ ಹೊಸದಾಗಿ ಬರೋ ಸುಂದರ ಇಂಗ್ಲಿಷ್ ಲೆಕ್ಚರ್ ಮೇಲೆ ಮನಸಾಗುತ್ತೆ. ನಂತ್ರ ಅವರಿಗೆ ಮದುವೆ   ಆಗಿದೆ  ಅಂತ ಗೊತ್ತಾದ ಮೇಲೆ ಈ ಮೊಟ್ಟೆ ಹುಡುಗನ ಗುಣವೇ ಮೇಲು ಎನಿಸುತ್ತೆ ಆಕೆಗೆ. ಇನ್ನೊಂದು ಕಡೆ  ಬೋಳುತಲೆಗಳನ್ನೇ ಬಂಡವಾಳವಾಗಿಟ್ಟು  ಕೊಂಡು ತನ್ನ ಕೆಲಸ ಸಾಧಿಸಿಕೊಳ್ಳಲು ಜನರ ಹಾದಿತಪ್ಪಿಸುವ ಹುಡುಗಿ.  ಅಮಾಯಕರನ್ನ ಹಾದಿತಪ್ಪಿಸುವ ಸಮಾಜದ ಕೆಲವು ಕಪಟಿ ಜನರಿಗೆ ಒಳ್ಳೆ ಉದಾಹರಣೆ ಯಾಗುತ್ತಾಳೆ.

 ಈ ಮೊಟ್ಟೆ ಹುಡುಗನಿಗೂ ಅಷ್ಟೇ,,ನನ್ನನ್ನು ಮೊದಲು ಎಸ್ಟೋ  ಜನ ಹುಡುಗಿಯರು ರಿಜೆಕ್ಟ್ ಮಾಡಿದ್ರು ಅನ್ನೋದನ್ನು ಮರೆತು, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಮಾತಿನಂತೆ ,,ಈತನನ್ನ ಇಷ್ಟಪಟ್ಟು, ಮನಸಾರೆ ಮದುವೆಯಾಗಲು ಒಪ್ಪಿಗೆ ಕೊಟ್ಟು, ತನ್ನ ಜೊತೆ ಎಂಗೇಜ್ ಮೆಂಟ್ ಆದ ಹುಡುಗಿ ದಪ್ಪ ಎಂದು, ಆಕೆಯನ್ನ ಮದುವೆಯಾದ್ರೆ  ಜೀವನವೇ ಜಿಗುಪ್ಸೆಯಾಗುತ್ತೆ ಅಂತ ಒಳಗೊಳಗೇ ಹಿಂಸೆ  ಪಡುತ್ತಿರುತ್ತಾನೆ. ಕೊನೆಗೊಂದು ದಿನ ಆಕೆಯೊಂದಿಗೆ ಮದುವೆಯನ್ನ ಮುರಿದುಕೊಳ್ಳುತ್ತಾನೆ. ಆಮೇಲೆ ತಾನು ಮಾಡಿದ್ದು  ತಪ್ಪು ಎಂದು ತಿಳಿದು  ಮತ್ತೆ ಆಕೆಯನ್ನೇ ಮದುವೆಯಾಗಲು ಚಡಪಡಿಸುವ ಪರಿ  ನೈಜತೆಯಿಂದ ಚಿತ್ರಿಸಿದ್ದಾರೆ.


ಮೊಟ್ಟೆ ನಾಯಕನ ಮನಸ್ಸು ಬದಲಾಯಿಸುವಲ್ಲಿ ಮುಖ್ಯ ಅನ್ನಿಸುವ ಪ್ರಸಂಗ ಎಂದರೆ ಕಾಲೇಜಿನಲ್ಲಿ ಈ ಮೊಟ್ಟೆಯ ಆಪ್ತ ಶ್ರೀನಿವಾಸ ಒಮ್ಮೆ ಆತನ ಮನೆಗೆ ಊಟಕ್ಕೆ ಕರೆಯುತ್ತಾನೆ. ಅವರ ಮನೆಗೆ ಹೋದಾಗ ಗೊತ್ತಾಗುತ್ತೆ ಆತನ ಹೆಂಡತಿ ಮೂಕಿ ಅಂತ.  ಆತನದು ಕೂಡ ಲವ್ ಮ್ಯಾರೇಜ್ ಅಂತ ನಾಯಕನಿಗೆ ಗೊತ್ತಿರುತ್ತೆ. ಆತ ಶ್ರೀನಿವಾಸನನ್ನು ಕೇಳುತ್ತಾನೆ ತಿಳಿದು ತಿಳಿದು ಮೂಕಿಯನ್ನ ಹೇಗೆ ಲವ್ ಮಾಡಿ ಮದುವೆ ಆದಿರಾ ಅಂತ. ಆಗ ಶ್ರೀನಿವಾಸ ಕೊಡುವ ಉತ್ತರ   ಜೀವನ ನಡೆಸಲು ಸೌಂದರ್ಯ ಮುಖ್ಯವಲ್ಲ, ಪ್ರೀತಿ ಮುಖ್ಯ, ಹೊಂದಿಕೊಂಡು ಹೋಗುವ ಮನಸ್ಸು ಇನ್ನು ಮುಖ್ಯ ಎಂದು. ಆ ಸಂದರ್ಭ ಪ್ರತಿಯೊಬ್ಬರ ಕಣ್ಣಿನ ಅಂಚಲ್ಲಿ ನೀರು ತರಿಸದೆ ಇರಲಾರದು. 

ಇದು ನಾನು ನೋಡಿದ ಒಂದು ಮೊಟ್ಟೆಯ ಕಥೆ ಸಿನೆಮಾದ ಬಗೆಗಿನ ನನ್ನ ಮಾತುಗಳು. 
  


No comments:

Post a Comment