Saturday, 29 July 2017

ಅಗಸೆ ಬೀಜವೆಂಬ ಸಂಜೀವಿನಿ

ಊಟ ಬರಿ ಹೊಟ್ಟೆಯ ಹಸಿವನ್ನು ಹೋಗಿಸುವ ಪದಾರ್ಥವಲ್ಲ. ಜೀವಿಗಳ ಬದುಕಿನ ಸಂಜೀವಿನಿ ಅದು. ಊಟದಲ್ಲಿ ಎಲ್ಲ ರೀತಿಯ ಪೋಷಕಾಂಶಗಳು ಸಮನಾಗಿ,   ಸಮಯಕ್ಕೆ ಸರಿಯಾಗಿ ದೇಹದಲ್ಲಿ ಬೆರೆತಲ್ಲಿ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಈಗಿನ ಒತ್ತಡದ ಬದುಕಿನಲ್ಲಿ ಒಂದೇ ಆಹಾರದಲ್ಲಿ ಎಲ್ಲಾ ರೀತಿಯ ಅಂಶಗಳು ಸಿಕ್ಕರೆ ಇನ್ನು ಒಳ್ಳೆಯದು ಅಲ್ಲವೇ. ನಮ್ಮ ಅಜ್ಜ ಅಜ್ಜಿಯರ ಪ್ರಕಾರ ಮೆಂತ್ಯ ತಿಂತಿದ್ರೆ ರೋಗಕ್ಕೆ ಅಂತ್ಯ ಅಂತ ಹೇಳುತ್ತಿದ್ದುದು ನೆನಪಾಯ್ತು. ಮೆಂತ್ಯದಂತೆ ಅನೇಕ ರೀತಿಯ ಕಾಳುಗಳು ನಮ್ಮ ಸುತ್ತ ಮುತ್ತ ಇರುತ್ತವೆ. ನಾವುಗಳು ಅವನ್ನು ಬಳಸಲು ಗೊತ್ತಿರಬೇಕು ಅಷ್ಟೇ,, ಈಗ ನಾ ಹೇಳ ಹೊರಟಿರುವುದು ಅಗಸೆ ಕಾಳಿನ ಬಗ್ಗೆ. ಆಧುನಿಕ ಆಹಾರ ಹಾವಳಿಯಲ್ಲಿ ಮೂಲೆ ಗುಂಪಾಗಿರುವ ಅಗಸೆ ಕಾಳಿನ ಬಗ್ಗೆ.

ಅಗಸೆ ಬೀಜಗಳು 
ಭೂಮಿ ಮೇಲೆ ಇರುವ ತೃಣಧಾನ್ಯಗಳಲ್ಲಿ ಮೊದಲ ಸ್ಥಾನ ಮೆಂತ್ಯಕ್ಕೆ. ಮೆಂತ್ಯ ವನ್ನು ಬಿಟ್ಟರೆ ಪೋಷಕಾಂಶಗಳನ್ನು ಹೊಂದಿರುವ 2 ನೇ ಸ್ಥಾನ ಸಿಗುವುದು ಈ  ಅಗಸೆ ಬೀಜಕ್ಕೆ.   ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡಲು ಇದು ನೆರವಾಗುತ್ತದೆ. ಈ ಅಗಸೆ ಬೀಜಕ್ಕೆ ಸುಮಾರು 6೦೦೦ ವರ್ಷಗಳ ಇತಿಹಾಸವಿದೆ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ.   ಶತಮಾನಗಳಿಂದಲೂ ಈ ಅಗಸೆ ಬೀಜಗಳು ಆಹಾರದ ಮೂಲಕ ಅನೇಕ  ಲಾಭಗಳನ್ನು ಒದಗಿಸುತ್ತಿದೆ.  ಕ್ರಿ.ಪೂ. 3೦೦೦ ನೇ ಶತಮಾನದಲ್ಲಿ  ಬ್ಯಾಬಿಲೋನಿಯಾದ ಇತಿಹಾಸದಲ್ಲಿ ಜನರ ದೈನಂದಿನ ಆಹಾರದಲ್ಲಿ ಅಗಸೆಗೆ ಪ್ರಮುಖ ಸ್ಥಾನ ಇತ್ತು ಎಂದು ವರ್ಣಿತವಾಗಿದೆ.  ಅಗಸೆ ಬೀಜಗಳಲ್ಲಿ ಅನೇಕ  ರೀತಿಯ ಆರೋಗ್ಯ ಗುಣಗಳಿವೆ.

ಅಗಸೆ ಬೀಜಗಳಲ್ಲಿನ ಅಂಶಗಳು :-
ಒಮೆಗಾ-3 ಕೊಬ್ಬಿನಾಮ್ಲವು ಒಳ್ಳೆಯ ಕೊಬ್ಬನ್ನು ಹೊಂದಿದ್ದು, ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದು ಚಮಚ ಅಗಸೆ ಬೀಜದಲ್ಲಿ 1.8 ಗ್ರಾಂನಷ್ಟು ಒಮೆಗಾ-3 ಕೊಬ್ಬಿನಾಮ್ಲವಿದೆ. ಅಗಸೆ ಬೀಜಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿರುತ್ತೆ. ಎಸ್ಟೋಜನ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ. ಅಗಸೆ ಬೀಜದಲ್ಲಿ ಕರಗುವ ಮತ್ತು ಕರಗದ ನಾರಿನಾಂಶವಿರುತ್ತದೆ. 


ಅಗಸೆ ಬೀಜದ ಆರೋಗ್ಯಕಾರಿ ಲಾಭಗಳು :-


 ಕ್ಯಾನ್ಸರ್ ಗೆ ಮದ್ದು:-
ಕ್ಯಾನ್ಸರ್ನ  ಇತ್ತೀಚಿನ ಅಧ್ಯಯನಗಳ ಪ್ರಕಾರ ಅಗಸೆ ಬೀಜವು ಸ್ತನ ಕ್ಯಾನ್ಸರ್, ಜನನಾಂಗ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಅಗಸೆ ಬೀಜದಲ್ಲಿರುವ ಲಿಗ್ನನಸ್ ಸ್ತನ ಕ್ಯಾನ್ಸರ್ ನ ಟ್ಯಾಮ್ಕ್ಷಿಫೆನ್ ನೊಂದಿಗೆ ಯಾವುದೇ ಹಸ್ತಕ್ಷೇಪ ಮಾಡದೆ ಹಾರ್ಮೋನುಗಳಿಗೆ ಸೂಕ್ಷ್ಮವಾಗಿರುವ ಕ್ಯಾನ್ಸರ್ ನಿಂದ ರಕ್ಷಣೆ ನೀಡಬಹುದು.


ಸ್ವಚ್ಛ ಹೃದಯಕ್ಕೆ:-
ಹೃದಯರೋಗ ಅಧ್ಯಯನಗಳ ಪ್ರಕಾರ ಒಮೆಗಾ-3 ಉರಿಯೂತ ವಿರೋಧಿ ಕ್ರಮ ಮತ್ತು ಹೃದಯಬಡಿತ ಸಾಮಾನ್ಯ ಮಾಡುವ ಮೂಲಕ ವಿವಿಧ ಕಾರ್ಯವಿಧಾನದೊಂದಿಗೆ ಹೃದಯರಕ್ತನಾಳ ವ್ಯವಸ್ಥೆಗೆ ನೆರವಾಗುತ್ತದೆ. ಹಲವಾರು ಅಧ್ಯಯನಗಳ ಪ್ರಕಾರ ಒಮೆಗಾ-3 ಭರಿತ ಆಹಾರಗಳು ಅಪಧಮನಿ ಗಟ್ಟಿಯಾಗುವುದನ್ನು ತಡೆಯಲು ನೆರವಾಗುತ್ತದೆ ಮತ್ತು ಬಿಳಿ ರಕ್ತಕಣಗಳು ರಕ್ತನಾಳಗಳ ಒಳಗೋಡೆಗೆ ಅಂಟಿಕೊಳ್ಳದಂತೆ ಇಟ್ಟುಕೊಂಡು ಲೋಳೆಯು ಅಪಧಮನಿಗಳಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ.


ಸಕ್ಕರೆ ಕಾಯಿಲೆ (ಮಧುಮೇಹ):-
ಸಕ್ಕರೆ ಕಾಯಿಲೆ ಇರುವವರು ದಿನಾಲೂ ಅಗಸೆ ಬೀಜ ತಿನ್ನುವುದರಿಂದ  ಅದರಲ್ಲಿನ ಲಿಗ್ನನಸ್ ಅಂಶಗಳು ರಕ್ತದ ಸಕ್ಕರೆಮಟ್ಟವನ್ನು  ಸುಧಾರಿಸುತ್ತದೆ.  ಎಂದು ವೈದ್ಯಕೀಯ  ಅಧ್ಯಯನಗಳು ಹೇಳಿವೆ.


ಉರಿಯೂತ:-
ಉರಿಯೂತ ಅಗಸೆ ಬೀಜದಲ್ಲಿರುವ ಅಲಾ ಮತ್ತು ಲಿಗ್ನೆನಸ್ ಕೆಲವೊಂದು ಉರಿಯೂತಕಾರಿ ಅಂಶಗಳು ದೇಹದಲ್ಲಿ ಬಿಡುಗಡೆಯಾಗದಂತೆ ತಡೆಯಲು ನೆರವಾಗಿ ಕೆಲವೊಂದು ರೋಗ(ಪರ್ಕಿಸನ್ ಮತ್ತು ಅಸ್ತಮಾ)ಗಳಿಗೆ ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. 


ಹೃದಯಾಘಾತ ಮತ್ತು ಪಾರ್ಶ್ವವಾಯು:-
ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಲಿಗ್ನೆನಸ್ ಉರಿಯೂತಕಾರಿ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಅಪಧಮನಿಗಳಲ್ಲಿ ಲೋಳೆಯು ಹೆಚ್ಚಾಗುವ ಮೂಲಕ ಉಂಟಾಗುವ ಉರಿಯೂತ ಕಡಿಮೆ ಮಾಡುವ ಮೂಲಕ ಅಗಸೆ ಬೀಜಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವನ್ನು ಕಡಿಮೆ ಮಾಡಲು ನೆರವಾಗುತ್ತದೆ.


ಮಹಿಳೆಯ ಮುಟ್ಟಿನ ಹಾಟ್ ಫ್ಲಾಷಸ್:-
ದಿನಕ್ಕೆ ಎರಡು ಚಮಚ ಅಗಸೆಬೀಜವನ್ನು  ಜ್ಯೂಸ್ ಅಥವಾ ಮೊಸರಿನೊಂದಿಗೆ ಸೇವನೆ ಮಾಡುವುದರಿಂದ ಹಾಟ್ ಫ್ಲಾಷಸ್ ಅರ್ಧದಷ್ಟು ಕಡಿಮೆಯಾಗುತ್ತದೆ. ಹಾಟ್ ಫ್ಲಾಷಸ್ ನ ತೀವ್ರತೆ ಶೇ.50% ರಷ್ಟು ಕಡಿಮೆಯಾಗುತ್ತದೆ. ನಿಯಮಿತವಾಗಿ ಅಗಸೆ ಈ ರೀತಿಯಾಗಿ ಮಹಿಳೆಯರು ಸೇವಿಸುತ್ತಿದ್ದರೆ ಗರ್ಭಕೋಶದ ಹಲವಾರು ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.

ಜೀರ್ಣ ಕ್ರಿಯೆ ಹೆಚ್ಚಿಸುತ್ತೆ:-
ಅಗಸೆಬೀಜದಲ್ಲಿರುವ ನಾರಿನ ಅಂಶ ಜೀರ್ಣ ಕ್ರಿಯೆಯನ್ನು ಸುಲಭಗೊಳಿಸುವುದಲ್ಲದೆ ಪೌಷ್ಟಿಕಾಂಶಗಳು ದೇಹಕ್ಕೆ ಸೇರೋ ಹಾಗೆ ಮಾಡುತ್ತದೆ. ಮಲಬಧ್ದತೆ ಸರಿಯಾಗಿ ಆಗುತ್ತದೆ. ಮೊಳಕೆ ರೋಗ ( ಪೈಲ್ಸ್ ) ಇರುವವರಿಗೆ ಈ ಅಗಸೆ ಹಸಿ ಬೀಜದ ಪುಡಿಯನ್ನ ಖಾಲಿ ಹೊಟ್ಟೆಗೆ ಕುಡಿದರೆ ರಕ್ತ ಸ್ರಾವ ಕಮ್ಮಿ ಆಗಿ, ನೋವು ಕಮ್ಮಿ ಆಗಿ, ಮೋಶನ್ ಸರಾಗವಾಗಿ ಆಗುತ್ತದೆ. ಎಂದು ಮನೆ ಮದ್ದು  ಪುಸ್ತಕಗಳಲ್ಲಿ ಬರೆದಿರುತ್ತಾರೆ.

ಚರ್ಮದ ಆರೋಗ್ಯಕ್ಕೆ:-
ಅಗಸೆ ಬೀಜದಲ್ಲಿನ ಎಣ್ಣೆ ಅಂಶ ಮೈ ಚರ್ಮ ಕೆಂಪಾಗೋದು, ಉರಿ- ತುರಿಕೆ ಯಾಗುವುದನ್ನು ತಪ್ಪಿಸುತ್ತದೆ.  ಮತ್ತು  ಮೈ ಚರ್ಮ ಮೃದುವಾಗಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಚರ್ಮಕ್ಕೆ ಸೂರ್ಯನ ತಾಪದಿಂದ ಆಗುವ ತೊಂದರೆಯನ್ನು ತಪ್ಪಿಸುತ್ತದೆ. ದಿನಾ ಒಂದೆರೆಡು ಚಮಚ ಅಗಸೆ ಬೀಜ ಹಸಿಯಾಗಿ ತಿನ್ನೋದ್ರಿಂದ ಮುಖದ ಮೇಲೆ ಮೊಡವೆಗಳು ಆಗುವುದಿಲ್ಲ.


ಕೂದಲುಗಳ ಸಮಸ್ಯೆಗೆ ಪರಿಹಾರ:-
ದಿನಾ ಅಗಸೆ ತಿನ್ನೋದ್ರಿಂದ ಕೂದಲುದುರುವುದು ನಿಲ್ಲುತ್ತದೆ. ಅಗಸೆ ಎಣ್ಣೆ ತಲೆಗೆ ಹಚ್ಚೊದ್ರಿಂದ ತಲೆ ಹೊತ್ತು ಕಮ್ಮಿ ಆಗುತ್ತದೆ. ಬೊಕ್ಕ ತಲೆ ಆಗಲು ನಮ್ಮ ದೇಹದಲ್ಲಿನ ಟೆಸ್ಟೋಸ್ಟೀರಾನ್  ಹಾರ್ಮೂನ್ ಕಾರಣ. ಈ ಹಾರ್ಮೋನ್ ಮಟ್ಟವನ್ನ ಸುಧಾರಿಸಿ ಬೊಕ್ಕ ತಲೆಯಲ್ಲಿ ಕೂದಲು ಉದುರುವುದು ನಿಲ್ಲುತ್ತದೆ.

 
ಈ ಅಗಸೆ ಬೀಜ ತನ್ನಲ್ಲಿರುವ ಪೌಷ್ಠಿಕಾಂಶಗಳಿಂದ ಇತ್ತೀಚಿಗೆ ಎಲ್ಲರ ಗಮನ ಸೆಳೆಯುತ್ತಿದೆ.  ದೇಹಕ್ಕೆ ಬೇಕಾಗುವಷ್ಟು ಫೈಬರ್, ಅಂಟಿ  ಆಕ್ಸಿಡೆಂಟ್ಸ್ , ಕಬ್ಬಿಣ, ಉತ್ತಮ ಕೊಬ್ಬಿನ ಅಂಶ ಹೊಂದಿದೆ. ಅಗಸೆನಾ ಸೊಪ್ಪು, ಬೀಜ ಮತ್ತು ಎಣ್ಣೆ ರೂಪದಲ್ಲಿ ಬಳಸಬಹುದು. ಮೀನು ತಿಂದಾಗ ಸಿಗುವ ಒಮೇಗಾ- ೩ ಅಗಸೆಯಲ್ಲಿ ಸಿಗುತ್ತೆ.  ಚರ್ಮ ಕೂದಲು ಅಲ್ಲದೆ ದೇಹದ ಹಲವು ಅಂಗಾಂಶಗಳಿಗೆ ಇದರ ಉಪಯೋಗಗಳಿವೆ.   ಆರೋಗ್ಯದ ಅವಶ್ಯಕತೆಗಾಗಿ ಮತ್ತೆ ಜನರು ನಮ್ಮ ಪೂರ್ವಿಕರ ಆಹಾರ ಪಧ್ದತಿಯ ಮೊರೆ ಹೋಗುತ್ತಿದ್ದಾರೆ. ಆಧುನಿಕ ವಿದೇಶೀ ಆಹಾರದ ಮಧ್ಯೆ ಕತ್ತಲಿಗೆ ಸರಿದಿದ್ದ ಅಗಸೆ ಬೀಜ ಮತ್ತೆ  ಬೆಳಕಿಗೆ ಬರುತ್ತಿದೆ.

ಅಗಸೆ ಕಾಳಿನ ಚಟ್ನಿ ಪುಡಿ, ಅಗಸೆ ಸೊಪ್ಪಿನ ಪಲ್ಯ, ಅಗಸೆ ಕಾಲಿನ ಎಣ್ಣೆ , ರೂಪದಲ್ಲಿ ಉಪಯೋಗಿಸಬಹುದು. ಅಗಸೆ ಕಾಲಿನ ಎಣ್ಣೆ ತೆಗೆದ ಮೇಲೆ ಬರುವ ಹೊತ್ತು ದನಕರುಗಳಿಗೆ ಹಿಂಡಿ  ರೂಪದಲ್ಲಿ ತಿನ್ನಿಸುತ್ತಾರಂತೆ.   


ಸಂಗ್ರಹ : ( ಅಂತರ್ಜಾಲ ತಡಕಾಡಿ ಹೆಕ್ಕಿ ಬರೆದದ್ದು )


Friday, 28 July 2017

ನಾನು ಮಾಡಿದ ಅಗಸೆ ಬೀಜದ ಚಟ್ನಿ ಪುಡಿ


 ಅಗಸೆ ಬೀಜಗಳು
ಹೀಗೆ ಒಂದಿನ ಅಂಗಡಿಗೆ ಹೋದಾಗ,  ಅಗಸೆ ಬೀಜ ಅಂತ ಹೆಸರು ಇರೋ ಬೀಜಗಳ ಪೊಟ್ಟಣ ನನ್ನ  ಕಣ್ಣಿಗೆ ಬಿತ್ತು. ಟ್ರೈ ಮಾಡಿ ನೋಡೋಣ ಅಂತ ತೊಗೊಂಡು ಬಂದೆ.  ನಮ್ಮ ಮನೆಯಲ್ಲಿ ಅಗಸೆ ಬೀಜವನ್ನ ತಂದೆ. ಅದನ್ನ ಹೇಗೆ ಅಡುಗೆಯಲ್ಲಿ ಬಳಸೋದು ಅಂತ ನಂಗೆ ಗೊತ್ತಿರಲಿಲ್ಲ.  ಯಾಕಂದ್ರೆ ನಾನು ಇದುವರೆಗೂ ಅದರ ಹೆಸರು ಕೇಳಿದ್ದೆ, ಚಟ್ನಿ ಪುಡಿ ತಿಂದಿದ್ದೆ. ಅಷ್ಟೇ.  ಅದೂ ನಾನು ಹಾಸ್ಟೆಲ್ ನಲ್ಲಿ ಇದ್ದಾಗ ಉತ್ತರ ಕರ್ನಾಟಕದಿಂದ ಬಂದಿದ್ದ ನನ್ನ ಕೆಲವು ಗೆಳತಿಯರು ಅದರ ಚಟ್ನಿ ಪುಡಿಯನ್ನ ತೊಗೊಂಡು ಬರ್ತಿದ್ರು.  ಆಗ ರುಚಿ ನೋಡಿದ ನೆನಪು ನನ್ನ ನಾಲಿಗೆಗೆ ಸ್ವಲ್ಪ ಗೊತ್ತಿತ್ತು ಅಷ್ಟೇ.   ಪ್ರತಿ ದಿನ ಅದನ್ನ ಏನು ಮಾಡೋದು ಅಂತ ಯೋಚನೆ ಮಾಡೋದು ಇನ್ನೊಂದು ದಿನ ಮಾಡಿದರಾಯ್ತು ಅಂತ ವಾಪಾಸ್ ಇಡೋದು .ಇದೇ ಆಗಿತ್ತು . ಒಂದು ದಿನ ನನ್ನ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಅಗಸೆ ಬೀಜದ ಫೋಟೋ ಹಾಕಿ, ಇದರ ಚಟ್ನಿ ರೆಸೆಪಿ ಹೇಳಿ ಅಂತ ಹಾಕಿದೆ. ಅದರಲ್ಲಿ ಅಂಬಿಕಾ ಅನ್ನೋ ನನ್ನ ಗೆಳತಿ  ಮಾಡೋ ರೀತಿಯನ್ನ ಕಳಿಸಿದಳು. ಹಾಗೇ ನಾನು ಅದರ ಪ್ರಕಾರ ಚಟ್ನಿ ಪುಡಿ ಮಾಡಿದೆ. ಮೊದಲ ಬಾರಿಯೇ ಅತಿ ರುಚಿಕಟ್ಟಾದ ಚಟ್ನಿ ಪುಡಿ ರೆಡಿ ಆಗಿತ್ತು. ನನ್ನ ಮಕ್ಕಳಿಗೂ ತುಂಬಾ ಇಷ್ಟ ಆಯ್ತು.  ಈ ಅಗಸೆ ಬೀಜ ಗೊತ್ತಿರದವರಿಗೆ ತಿಳಿಸಲೆಂದು ಈ ಲೇಖನ ಬರೀತಾಯಿದೀನಿ. ಹಾಗೆ ಅದನ್ನ ಇತರರು ರುಚಿ ನೋಡ್ಲಿ ಅಂತ ಅದನ್ನ ಮಾಡುವ ರೀತಿಯನ್ನ ಇಲ್ಲಿ ಬರೀತಾಯಿದೀನಿ.

ಅಗಸೆ ಬೀಜದ ಚಟ್ನಿ ಪುಡಿ

ಅಗಸೆ ಬೀಜದ ಚಟ್ನಿ ಮಾಡುವ ವಿಧಾನ :-ಬೇಕಾಗಿರುವ ಸಾಮಗ್ರಿಗಳು 

ಮೊದಲು ಅಗಸೆ ಬೀಜಗಳನ್ನ ಕಡಿಮೆ ಉರಿಯಲ್ಲಿ  ಕಾಳುಗಳು ದುಂಡಗೆ, ಸ್ವಲ್ಪ ಕಂದು ಬಣ್ಣ ಬರುವಂತೆ, ಹಸಿವಾಸನೆ ಹೋಗುವಂತೆ ಹುರಿದುಕೊಳ್ಳಬೇಕು. ಜೊತೆಗೆ ಶೇಂಗಾ ಬೀಜಗಳನ್ನು ಸ್ವಲ್ಪ ಹುರಿದುಕೊಳ್ಳಬೇಕು. ಅದಕ್ಕೆ ಒಂದು ಚಿಕ್ಕ ಚಮಚ ಜೀರಿಗೆ , ಒಂದು ಚಿಕ್ಕ ಚಮಚ ಖಾರದ ಪುಡಿ, ರುಚಿಗೆ ಎಷ್ಟು ಬೇಕೋ ಅಷ್ಟು ಉಪ್ಪು, ಒಂದೆರೆಡು ಎಸಳು ಹುಣಸೇಹಣ್ಣು, ಒಂದು ದೊಡ್ಡ ಗಾತ್ರದ ಬೆಳ್ಳುಳ್ಳಿ, ಒಂದು ನಿಂಬೆಹಣ್ಣು ಗಾತ್ರದ ಬೆಲ್ಲ   ಎಲ್ಲವನ್ನು ಸೇರಿಸಿ ಮಿಕ್ಸಿಗೆ ಹಾಕಿ ಪುಡಿ ಮಾಡಬೇಕು. ನೀರು ತಾಕಿಸಬಾರದು.


ಮಿಕ್ಸರ್ ನಲ್ಲಿ  ತಯಾರಾಗಿರುವ ಅಗಸೆ ಚಟ್ನಿ ಪುಡಿ 


Monday, 24 July 2017

ಶ್ರಾವಣ ಮಾಸ ಬಂದಾಗ - ಹಬ್ಬಗಳು ಬಂದಾಗ

ಶ್ರಾವಣ ಬಂತೆಂದರೆ ನಮ್ಮ ಹೆಣ್ಣುಮಕ್ಕಳ ಕಣ್ಣುಗಳಲ್ಲಿ ಸಂತಸದ ಛಾಯೆ ಎದ್ದು ಕಾಣುತ್ತಿರುತ್ತದೆ. ಎಲ್ಲ ಹೆಣ್ಣುಮಕ್ಕಳ ಸಮೂಹ ಒಟ್ಟುಗೂಡಿ ಹಬ್ಬಗಳ ಆಚರಣೆಗೆ ಮುಂದಾಗುತ್ತಾರೆ. ಭೀಮನ ಅಮಾವಾಸ್ಯೆಯಿಂದ ಶುರುವಾಗೋ ನಮ್ಮ ಹೆಣ್ಣುಮಕ್ಕಳ ವ್ರತಗಳು, ಹಬ್ಬಗಳು,  ಮನೆ- ಮಂದಿ,  ಊರು- ಕೇರಿ, ಕಣ್ಣು ಹೊರಳಿದ ಕಡೆಯಲ್ಲೆಲ್ಲಾ ಹೊಸತನದ ರಂಗು ಚಿಮ್ಮುತ್ತಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಮನೆಯ ಸುಖ ಸಮೃದ್ಧಿಗಾಗಿ ಹೆಣ್ಣುಮಕ್ಕಳು ಪೂಜೆ ವ್ರತಾಚಾರಣೆಗಳನ್ನ  ಮಾಡುವುದು  ಸಾಮಾನ್ಯ.

ಮಂಗಳ ಗೌರೀ ವ್ರತ  
 ಶ್ರಾವಣ ಮಾಸ ಎಂದರೆ ಶಿವನ ಮಾಸ ಎಂದು ಹೇಳಲಾಗುತ್ತದೆ. ನಮ್ಮೂರಿನ ಕಡೆ ಶ್ರಾವಣ ಮಾಸದಲ್ಲಿ ಅವರವರ ಮನೆಯ ರೂಢಿಯಂತೆ ಕುಲ ದೇವರ  ವಾರಗಳ  ದಿನಗಳಂದು  ವಿಶೇಷವಾಗಿ ಪೂಜೆ ಮಾಡುತ್ತಾರೆ.  ಅಂದು ಮನೆಯಲ್ಲಿ ಸಿಹಿ ಮಾಡಿ ಉಣ್ಣುತ್ತಾರೆ. ನಾವು ಚಿಕ್ಕವರಿದ್ದಾಗ ನಮ್ಗೆಲ್ಲಾ  ಶ್ರಾವಣ  ಅಂದ್ರೆ  ವಿವಿಧ ಬಗೆಯ ಊಟ ಮತ್ತು ವಿಶೇಷ ತಿಂಡಿಗಳನ್ನ ಚಪ್ಪರಿಸಿ ತಿನ್ನುವ  ಖುಷಿ. 

ನಾವು ಚಿಕ್ಕವರಿದ್ದಾಗ ಶ್ರಾವಣ ಮಾಸದಲ್ಲಿ ನಮ್ಮ ಮನೆಗಳಲ್ಲಿ ನಮಗೆ ವಹಿಸುತ್ತಿದ್ದ ಸಾಮಾನ್ಯ ಕೆಲಸ ಹೀಗಿತ್ತು ಸೋಮವಾರ ಬಸವಣ್ಣ ಮತ್ತು ಶಿವನ ಗುಡಿಗೆ,  ಮಂಗಳವಾರ, ಶುಕ್ರವಾರ , ಕುಕ್ಕಡದಮ್ಮ, ಕಾಳಮ್ಮ, ಕರಿಯಮ್ಮ ಗುಡಿಗಳಿಗೆ, ಗುರುವಾರ ದತ್ತಾತ್ರೇಯ ಆಶ್ರಮಕ್ಕೆ, ಶನಿವಾರ ಆಂಜನೇಯ ಗುಡಿಗಳಿಗೆ  ಎಣ್ಣೆ ಬತ್ತಿ , ಕಾಯಿ , ಬಾಳೆಹಣ್ಣು ,  ಊದುಬತ್ತಿ, ಎಡೆ  ಎಲ್ಲ ತೊಗೊಂಡ್ ಹೋಗಿ ಪೂಜೆ ಮಾಡಿ ಎಡೆ ಕೊಟ್ಟು ಬರೂ ಕೆಲಸ ವಹಿಸುತ್ತಿದ್ರು. ನಾವು ಗುಡಿಗಳಿಗೆ ಹೋದಾಗ ಅಲ್ಲಿ  ಗುಡಿಗಳಲ್ಲಿ ಎಷ್ಟೊಂದು ರೀತಿಯ ಎಡೆ ಇರ್ತಿದ್ವು  ಅಂದ್ರೆ!!! ನಮ ಬಾಯಲ್ಲಿ ನೀರು ಬರ್ತಿತ್ತು. ಕೆಲವೊಮ್ಮೆ ನಮ್ಮ ಇಷ್ಟದ ತಿಂಡಿಗಳು ಇದ್ರೆ ಅದು ನಮ್ಮ ಹೊಟ್ಟೆ ಸೇರೋದು ಖಾಯಂ ಆಗಿತ್ತು. ಗಿಣ್ಣವನ್ನ ಎಡೆಯಾಗಿ ಯಾರಾದ್ರೂ ಕೊಟ್ಟಿದ್ರಂತೂ ಅದು ನಮ್ಮೊಟ್ಟೆ ಸೇರೇಸೇರ್ತೀತ್ತು.  ಅಲ್ಲಿ ಯಾರಾದ್ರೂ ದೊಡ್ಡೋರು ನೋಡಿದ್ರೆ ದೇವ್ರಿಗೆ ಅಂತ ಎಡೆ  ಇಟ್ಟಿದ್ದನ್ನ ತಿನ್ನಬಾರದು ಅಂತ ಬೈಯ್ಯೋವ್ರು. ನಾವು ಅವ್ರಿಗೆ ತಿರುಗಿಸಿ 'ನಿಮ್ಮನೆ ಎಡೆ ನಾವೇನು ಮುಟ್ಟಿಲ್ಲ ಬಿಡಿ' ಅಂತ ತಿರುಗಿಸಿ ಉತ್ರ ಕೊಡುತಿದ್ವಿ.  ಇನ್ನು ಕೆಲವರು ಚಿಕ್ಕಮಕ್ಳು ತಿಂದ್ರೆ ಏನು ಆಗಲ್ಲ ತಿನ್ನಿ ತಿನ್ನಿ ಅಂತ ಪ್ರೋತ್ಸಾಹಿಸುತ್ತಿದ್ರು. ಇದು ನಮ್ಮ ಚಿಕ್ಕಂದಿನ ಶ್ರಾವಣ.

ವರಮಹಾಲಕ್ಷ್ಮಿ ವ್ರತ 
ಆಗೆಲ್ಲ ನಮಗೆ ಶ್ರಾವಣ ಅಂದ್ರೆ ಏನು? ಅದರ ವಿಶೇಷತೆ ಏನು ? ಏನೂ  ಗೊತ್ತಿರ್ಲಿಲ್ಲ, ಶ್ರಾವಣದ  ಬಗ್ಗೆ ಮೇಲೆ ಹೇಳಿದ ಸಂಗತಿಗಳು ಮಾತ್ರ ಈಗ ನಮಗೆ ನೆನಪಿರುವುದು.  ಆಮೇಲೆ  ನಾವು ಬೆಳೆದಂತೆ ತವರು ಮನೆ - ಗಂಡನ ಮನೆ ಅಂತ ನಾವು ಕೂಡ ಕೆಲವೊಂದು ಆಚರಣೆಗಳನ್ನ ಪಾಲಿಸಿಕೊಂಡು ಹೋಗುವ ಜವಾಬ್ದಾರಿಗಳು ಬಂದವು. ಅದರ ಜೊತೆ . ಕೆಲವೊಂದು ರೂಢಿಗಳನ್ನ  ಮನೆಯಲ್ಲಿ ಹೇಳಿಕೊಟ್ಟರೆ,  ಇನ್ನು ಕೆಲವು ನ್ಯೂಸ್ ಪೇಪರ್ ಓದಿ , ಟಿವಿ ಕಾರ್ಯಕ್ರಮಗಳನ್ನು ನೋಡಿ, ಅಥವಾ ಸುತ್ತ ಮುತ್ತ ಕೆಲವರು ಮಾಡುವದನ್ನು ನೋಡಿ.  ಒಹೋ ಇದನ್ನ ಮಾಡಿದರೆ ನಮಗೆ ಒಳ್ಳೆಯದಾಗುತ್ತೆ ಅನ್ನೋ ಆಸೆಯಲ್ಲಿ , ಈ ರೀತಿಯಾಗಿ ಹಲವಾರು ವ್ರತ ಪೂಜೆಗಳನ್ನ ರೂಢಿಸಿಕೊಂಡು ಶ್ರಾವಣದಲ್ಲಿ ಪ್ರತಿ ದಿನ ಹಬ್ಬ ಎನ್ನುವಂತೆ ವ್ರತಾಚರಣೆಗಳನ್ನ ಮಾಡುತ್ತಿದ್ದೇವೆ.

ಋತುಗಳ ರಾಜ ವಸಂತ ಋತುವಾದರೆ, ಮಾಸಗಳ ರಾಜ ಶ್ರಾವಣ ಮಾಸ ಎನ್ನಬಹುದೇನೋ. ಈ ಶ್ರಾವಣ ಮಾಸದಲ್ಲಿ ಬರುವಷ್ಟು ಹಬ್ಬ ಮತ್ತು ವ್ರತಾಚರಣೆಗಳು ಇನ್ನಾವ ಮಾಸದಲ್ಲೂ ಬರುವುದಿಲ್ಲ ಎಂದೇ ಹೇಳಬಹುದು.

ಪಂಚಾಂಗದ ಪ್ರಕಾರ ಶ್ರಾವಣ ಮಾಸದಲ್ಲಿ ಒಂದೇ ರೇಖೆಯಲ್ಲಿ ೧೭ ನಕ್ಷತ್ರಗಳು ಮಳೆಯನ್ನೂ ತರುತ್ತವೆ.

ನಮ್ಮಲ್ಲಿ ಆಷಾಢ ಮಾಸದಲ್ಲಿ ಅತ್ತೆ-ಸೊಸೆ, ಮಾವ-ಅಳಿಯ, ಗಂಡ-ಹೆಂಡತಿ ಒಂದೇ ಮನೆಯಲ್ಲಿ ಇರುವಂತಿಲ್ಲ.  ಮತ್ತು ಒಬ್ಬರ ಮುಖ ಒಬ್ಬರು ನೋಡುವಂತಿಲ್ಲ.  ಎಂಬ ವಾಡಿಕೆ ಇದೆ. ಆಷಾಢ ಮಾಸ ಕಳೆದ ನಂತ್ರ ಬರುವುದೇ ಈ ಶ್ರಾವಣ ಮಾಸ.  ಈ ಮಾಸದಲ್ಲಿ ದೂರಾಗಿದ್ದ ಗಂಡ - ಹೆಂಡತಿ , ಅತ್ತೆ - ಸೊಸೆ, ಮಾವ - ಅಳಿಯ, ಮುಖಾ ಮುಖಿಯಾಗಿ ಭೇಟಿಯಾಗುತ್ತಾರೆ. ಅದೂ ಹಲವು ಹಬ್ಬಗಳನ್ನ ಆಚರಿಸುವ ಮೂಲಕ!!.

ಮೊದಲು ಬರುವುದು ಭೀಮನ ಅಮಾವಾಸ್ಯೆ ಹೆಂಡತಿ ತನ್ನ ತಾಳಿ ಭಾಗ್ಯ ಗಟ್ಟಿ ಇರಲೆಂದು ಗಂಡನ ಆಯಸ್ಸು ಆರೋಗ್ಯ ಮತ್ತು ಸಮೃದ್ಧಿಗೆ ಶಿವನನ್ನು ಕುರಿತು ಮಾಡುವ ವ್ರತವಾಗಿದೆ. ಹೀಗೆ ಮಂಗಳ ಗೌರಿ, ನಾಡಹಬ್ಬ ನಾಗ ಚತುರ್ಥಿ (ಪಂಚಮಿ), ಬಸವ ಪಂಚಮಿ,  ಮಂಗಳ ಗೌರೀ ವ್ರತ, ವರಮಹಾಲಕ್ಷ್ಮೀ ವ್ರತ, ಗಾಯತ್ರೀ ಆರಾಧನೆ, ಶ್ರೀ ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಹೀಗೆ ಒಂದೊಂದಾಗಿ ಹಬ್ಬಗಳು ಆಚರಿಸಲ್ಪಡುತ್ತವೆ.

ನಾಗಪಂಚಮಿ 

Friday, 21 July 2017

ಡಾಕ್ಟರ್ ಫಿಶ್- ಕೆಲವು ಚರ್ಮದ ತೊಂದರೆಗಳಿಗಾಗಿ

ಡಾಕ್ಟರ್ ಫಿಶ್ ಏನಪ್ಪಾ ಇದು ಮೀನುಗಳು ಯಾವಾಗ ಡಾಕ್ಟರ್ ಸರ್ಟಿಫಿಕೇಟ್ ತೊಗೊಂದ್ವು  ಅಂತ ಅನ್ನಿಸ್ತಿದ್ಯಾ?  ಮೊದಲು ನಂಗು ಕೂಡ ಹಾಗೆ ಅನ್ನಿಸ್ತು. ಹೋದ ಶನಿವಾರ ಮೈಸೂರ್ಗೆ ಹೋದಾಗ,  ಅಲ್ಲಿ  ಕ್ಲೇ ಮ್ಯೂಸಿಯಂ ಹತ್ರ ಒಂದು ಫಿಶ್ ಟ್ಯಾಂಕ್ ನಲ್ಲಿ  ಚಿಕ್ಕ ಮೀನುಗಳು ಇದ್ವು ಕೆಲವರು ಅದರೊಳಗೆ  ಕಾಲು ಇಳಿಸಿಕೊಂಡು ಕೂತಿದ್ರು. ಡಾಕ್ಟರ್ ಫಿಶ್ ಸ್ಪಾ.  ಪರ್ ೧೦೦ ಫಾರ್ ೧೦ ಮಿನಿಟ್ಸ್ ಅಂತ ಬರೆದಿತ್ತು.  ನೋಡೋಣ ಒಂದು ಟ್ರೈ ನಾನು ಮಾಡೋಣ ಅಂತ ೧೦೦ ರೂಪಾಯಿ  ಕೊಟ್ಟು ನಾನು ಆ ಡಾಕ್ಟರ್ ಫಿಶ್ ಟ್ಯಾಂಕ್ ಒಳಗೆ ಕಾಲಿಟ್ಟು ಕುಳಿತೆ. ನಾನು ಕಾಲ್ನ ನೀರಿಗೆ ಇಳಿಸಿದ್ದೀ ತಡ ಆ ಟ್ಯಾಂಕ್ ನಲ್ಲಿದ್ದ  ಫಿಶ್ ಗಳೆಲ್ಲ ನನ್ನ ಕಾಲಿಗೆ ಮುತ್ತಾಕೊಂಡುಬಿಟ್ಟವು. ತಕ್ಷಣ ಭಯ ಆಯ್ತು, ನಂತ್ರ ಅವು ನನ್ನ ಪಾದಗಳಿಗೆ ಕಚಗುಳಿ ಕೊಡ್ತಾಯಿದ್ವು. ನಂತ್ರ ಭಯ ಹೋಗಿ ಮೀನುಗಳ  ಕಚಗುಳಿ ತಡ್ಕೊಳ್ಳೊಗಾಗ್ದೇ ನಗು ಬರ್ತಿತ್ತು.
ಹಾಗೆ ಮೀನುಗಳ  ಮಾಲೀಕಳನ್ನ ಕೇಳಿದೆ ಏನಿದರ ವಿಶೇಷ?  ಎಲ್ಲಿಂದ ನೀವು ಇದನ್ನ ತೊಗೊಂಡ್ ಬರ್ತೀರಾ ಅಂತ. ಅದಕ್ಕೆ ಆಕೆ ಕೊಟ್ಟ ಉತ್ತರ ಇವುಗಳ ಹೆಸರು ಡಾಕ್ಟರ್ ಫಿಶ್ ಅಥವಾ  ಸರ್ಜನ್ ಫಿಶ್ ಅಂತ.  ಈ ಮೀನುಗಳು  ನಮ್ಮ ದೇಹದ ಡೆಡ್ ಸ್ಕಿನ್, ಇನ್ಫೆಕ್ಷನ್, ಕೊಳೆಯ ಭಾಗವನ್ನ ತಿಂದು ಸ್ಕಿನ್ ನನ್ನ ಕ್ಲೀನ್ ಮಾಡುತ್ತವೆ. ಹಾಗೆ ನರಗಳ ರಕ್ತ ಪರಿಚಲನೆಗೆ ಹೆಲ್ಪ್ ಮಾಡುತ್ತವೆ.  ವಿದೇಶಗಳಲ್ಲಿ ಸ್ಕಿನ್ ಪ್ರಾಬ್ಲೆಮ್ಸ್ ಗೆ ಈ ಫಿಶ್ ನ ಉಪಯೋಗಿಸುತ್ತಾರೆ. ನಮ್ಮ ಆಯುರ್ವೇದದಲ್ಲಿ ಗಿಜಣೆ ಗಳನ್ನು ಬಳಸುವುದಿಲ್ವ ಹಾಗೆ ಇದು ಒಂದು ರೀತಿಯ ಟ್ರೀಟ್ಮೆಂಟ್ ಅಂತ ಹೇಳಿದ್ಲು. ಇತ್ತೀಚಿನ ದಿನಗಳಲ್ಲಿ ಸ್ಪಾ ಗಳಲ್ಲಿ ಈ ಫಿಶ್ ಗಳ  ಹೆಚ್ಚು ಬೇಡಿಕೆ ಇದೆ ಅಂತ ಹೇಳಿದ್ಲು. 

ವಾಪಸ್ ಬೆಮನೆಗೆ ಬಂದ್ರೂ ಆ ಡಾಕ್ಟರ್ ಫಿಶ್ ವಿಷಯ ನನ್ನ ತಲೇಲಿ  ಗಿರಾಕಿ ಹೊಡಿತಾಯಿತ್ತು. ನೋಡೋಣ ಅಂತ ಕುತೂಹಲಕ್ಕೆ ಗೂಗಲ್ ಸರ್ಚ್ ಮಾಡಿದಾಗ ನಂಗೆ ಸಿಕ್ಕ ಡಾಕ್ಟರ್ ಫಿಶ್ ನ ಕೆಲವು  ಮಾಹಿತಿಗಳನ್ನ ಇಲ್ಲಿ ಬರೀತಾಯಿದೀನಿ. 

ಈ ಡಾಕ್ಟರ್ ಫಿಶ್ ನ ನಿಜವಾದ ಹೆಸರುಗಳು  ಗರ್ರ ರುಫಾ , ನಿಬ್ಬಲ್ ಫಿಶ್ ,ಕಂಗಾಲ್ ಫಿಶ್ , ಬೋನೇಫಿಶ್  ಈ ಮೀನು ಸಿಪ್ರಿನಿಡ್ ಅನ್ನೋ ತಳಿಯ ಮೀನುಗಳ ಗುಂಪಿನಲ್ಲಿ ಬರುತ್ತವೆ.  ಇದು ಸಾಮಾನ್ಯವಾಗಿ ಸಿಹಿನೀರಿನ ಕೊಳಗಳು , ಸರೋವರ,  ಹೊಂಡ,  ನದಿಗಳಲ್ಲಿ ಕಂಡುಬರುತ್ತವೆ. ನೀರಿನಲ್ಲಿನ ಪಾಚಿ, ಮತ್ತು ಸಣ್ಣ ಪುಟ್ಟ ಗಿಡಗಳು, ನೀರಿನಲ್ಲಿರುವ ಪ್ರಾಣಿಗಳ ಮೇಲಿನ ಡೆಡ್ ಸ್ಕಿನ್  ಇವು ಇವುಗಳ ಊಟ. ಈ ಡಾಕ್ಟರ್ ಮೀನುಗಳು ಚರ್ಮದಲ್ಲಿನ ಡೆಡ್ ಸ್ಕಿನ್,  ಕ್ರಿಮಿ, ಕೊಳೆ  ತಿನ್ನುವುದರಿಂದ ಈ ಫಿಷ ನನ್ನ ಆಹಾರವಾಗಿ ತಿನ್ನಲು ಯೋಗ್ಯವಲ್ಲ ಎನ್ನುವರು. 

ಇವು ಸಾಮಾನ್ಯವಾಗಿ ಕಂಡುಬರುವುದು, ಟರ್ಕಿ, ಸಿರಿಯಾ,ಓಮನ್, ಇರಾಕ್, ಇರಾನ್,ದೇಶಗಳಲ್ಲಿ ಹೆಚ್ಚು ಪ್ರಮಾಣಗಳಲ್ಲಿ ಕಂಡುಬರುತ್ತವೆ. ಟರ್ಕಿ ದೇಶದಲ್ಲಿ ಸರ್ಕಾರವೇ ಕಾನೂನು ಬಧ್ದಹವಾಗಿ ರಫ್ತು  ಮಾಡುವ ಉದ್ದೇಶದಿಂದ ರಕ್ಷಣೆ ಮಾಡುತ್ತದೆ. 

೨೦ ನೇ  ಶತಮಾನದಿಂದ ಈ ಮೀನುಗಳನ್ನು ಕೆಲವೇ ದೇಶಗಳಲ್ಲಿ ಸೋರಿಯಾಸಿಸ್ ನಂತಹ ಚರ್ಮ ರೋಗಕ್ಕೆ ಟ್ರೀಟ್ಮೆಂಟ್ ರೀತಿ ಬಳಸುತ್ತಿದ್ದರು. ಇತ್ತೀಚಿಗೆ ಸ್ಪಾ ಗಳಲ್ಲಿ ಪೆಡಿಕ್ಯೂರ್ ಮತ್ತು ಬಾಡಿ ಮಸಾಜ್ ಮಾಡಲು ಈ ಡಾಕ್ಟರ್ ಫಿಶ್ ಗಳ  ಮೊರೆ ಹೋಗುತ್ತಿದ್ದಾರೆ. ಇತ್ತೀಚಿಗೆ ಚೀನಾ, ಜಪಾನ್, ಇಂಡಿಯಾ ಮುಂತಾದ ದೇಶಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.   

Thursday, 20 July 2017

ಸಾಮಾನ್ಯ ವ್ಯಕ್ತಿ ನಾಯಕನಾದಾಗ - ಒಂದು ಮೊಟ್ಟೆಯ ಕಥೆ

ಇತ್ತೀಚಿನ ಸಿನೆಮಾಗಳನ್ನ ನೋಡಿದಾಗ ಫೇಮಸ್ ನಾಯಕ , ಫೇಮಸ್ ನಾಯಕ ನಟಿ, ಅದ್ದೂರಿ ಸೆಟ್, ಅವಾಚ್ಯ ಮಾತುಗಳು ,ಹೊಡೆದಾಟ ಬಡಿದಾಟಗಳು , ಚಾಕು, ಚೂರಿ, ಮಚ್ಚು, ಕತ್ತಿ, ರಕ್ತ, ಇವುಗಳು ಇದ್ರೆ  ಒಳ್ಳೆ ಸಿನಿಮಾ ಮಾಡಬಹುದು.  ಜನರ ಮನಸ್ಸನ್ನ ಗೆಲ್ಲಬಹುದು  ಅನ್ನೋ  ಜನ ಒಂದು ಕಡೆಯಾದ್ರೆ. ಇನ್ನು ಕೆಲವರು ಇತ್ತೀಚಿನ ದಿನಗಳಲ್ಲಿ ಹಣ ಗಳಿಸುವ ಭರ ಮತ್ತು ಜನರ ಮನಸ್ನಲ್ಲಿ ನಾವು ಸದಾ ಇರಬೇಕು ಅನ್ನೋ ಆಸೆ. ಒಳ್ಳೆ ರೀತಿಯಲೋ  ಅಥವಾ ಕೆಟ್ಟ ರೀತಿಯಲೋ ಒಟ್ಟು ಪ್ರಚಾರದಲ್ಲಿ ಇರಬೇಕು ಅನ್ನೋ ಮನೋಭಾವನೆ ಈಗ ಚಿತ್ರರಂಗದಲ್ಲಿ ಇದೆ. ಒಟ್ಟಿನಲ್ಲಿ ಜನ ಅವರುಗಳ ಬಗ್ಗೆ ಮಾತಾಡಿಕೊಳ್ಳುತ್ತಾನೆಯೇ ಇರಬೇಕು ಅದಕ್ಕೋಸ್ಕರ ಎಂಥಾ ಚೀಪ್ ಗಿಮಿಕ್ ಮಾಡೋಕು ರೆಡಿ ಇರ್ತಾರೆ ಕೆಲವರು. ಅಂತಹುದರಲ್ಲಿ  ಯಾವುದೇ ಅತಿರೇಕಗಳನ್ನ ಮಾಡದೇ ಸರಳ ಸುಂದರ ಸಿನೆಮಾ ಮಾಡಿ ಗೆದ್ದಿದೆ.  ರಾಜ್ ಕುಮಾರ್ ರವರನ್ನು ಆದರ್ಶವಾಗಿಟ್ಟು ಕೊಂಡು ಬದುಕುವ ಮೊಟ್ಟೆ ತಲೆಯ ವ್ಯಕ್ತಿ ಜೀವನ ಸುಂದರವಾಗಿ ಮೂಡಿಬಂದಿದೆ.  ಈ ಭಾನುವಾರ ನಾ ನೋಡಿದ ಸಿನೆಮಾ ಒಂದು ಮೊಟ್ಟೆಯ ಕಥೆ . ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಿರುವಂತ ಅತಿರೇಕಗಳು ಈ ಚಿತ್ರದಲ್ಲಿ ಇಲ್ಲ. ಅಂದ್ರೆ  ನಾಯಕ - ಖಳ ನಾಯಕರ ಹೊಡೆದಾಟ ಬಡಿದಾಟವಿಲ್ಲದ, ನಾಯಕಿಯರ ದೇಹಪ್ರದರ್ಶನವಿಲ್ಲ, ನಿಜವಾದ ಸೌಂದರ್ಯ ಅಂದ್ರೆ ಏನು ಎಂದು ತಿಳಿಸಿದ ಚಿತ್ರ, ಸಹ ನಟ - ನಟಿಯರನ್ನು ಹೊಡೆದು, ಬಡಿದು , ತಳ್ಳಿ  ತಮಾಷೆ ಮಾಡದೇ ನಗು ತರಿಸಿದ ಚಿತ್ರ . ಅತಿರೇಕ ಎನ್ನೋ ಸೆಂಟಿಮೆಂಟ್ ಡೈಲಾಗ್ ಇಲ್ಲದೆ ಕಣ್ಣಂಚಲ್ಲಿ ನೀರು ಜಿನುಗಿಸುತ್ತೆ. ಇದು ಅಂತ ನನಗೆ ಅನ್ನಿಸ್ತು.

ಇದು ಸಾಮಾನ್ಯ ಜನ ಜೀವನದಲ್ಲಿ ನಡೆಯುವ ಸತ್ಯ ಸಂಗತಿಗಳನ್ನ ತೆರೆ ಮೇಲೆ ಆಡಂಬರವಿಲ್ಲದೆ ಸರಳವಾಗಿ ನೈಜತೆಯಿಂದ ಚಿತ್ರಿಸಿರುವ ಸಿನೆಮಾ ಇದಾಗಿದೆ. ಜನಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಈ ಮೊಟ್ಟೆಯ ಕಥೆಯ ನಾಯಕ.  ಅವರವರ ಜೀವನಕ್ಕೆ ಅವರೇ ನಾಯಕ ನಾಯಕಿಯರು ಅಲ್ವ? ಹಾಗೆ ಒಬ್ಬ ಮೊಟ್ಟೆ ತಲೆಯ ವ್ಯಕ್ತಿ ಯೊಬ್ಬನ ಜೀವನವನ್ನ ಕೇಂದ್ರವಾಗಿಟ್ಟು ಮೂಡಿಬಂದಿರುವ ಸಿನೆಮಾ ಇದು. ಆತನಿಗೆ ತನ್ನ ಬೋಳು ತಲೆಯಿಂದ ಪ್ರತಿದಿನ ಆಗುವ ಅವಮಾನಗಳು.  ಮದುವೆಯಾಗುವ ಹುಡುಗಿಯರು ಆತನನ್ನು ರಿಜೆಕ್ಟ್ ಮಾಡಿದರೂ,,, ಈ ಬಾರಿ ಮದುವೆ  ಸಂಬಂಧ ಏನಾಯ್ತು? ಅಂತ ಯಾರಾದ್ರೂ ಕೇಳಿದ್ರೆ.  ಆತ ತಾನೇ ರಿಜೆಕ್ಟ್ ಮಾಡಿದೆ ಅನ್ನೋ ಸುಳ್ಳು ಸ್ವಾಭಿಮಾನದ ಮಾತು. ಸಮಯ ಸಂದರ್ಭಕ್ಕೆ ಸರಿಯಾಗಿ ಬರುವ ಅಣ್ಣಾವ್ರ ಹಾಡುಗಳು ಪ್ರತಿಬಾರಿ ನಗು ಬರಿಸುತ್ತವೆ . 


ತನ್ನ ಎದುರಿರುವ ಎಕನಾಮಿಕ್ಸ್ ಲೇಡಿ ಲೆಕ್ಚರ್ಳನ್ನು  ಇಷ್ಟ ಪಡುತ್ತಾನೆ. ನಂತ್ರ ಅವಳು ಕಾಲೇಜಗೆ ಹೊಸದಾಗಿ ಬರೋ ಸುಂದರ ಇಂಗ್ಲಿಷ್ ಲೆಕ್ಚರ್ ಮೇಲೆ ಮನಸಾಗುತ್ತೆ. ನಂತ್ರ ಅವರಿಗೆ ಮದುವೆ   ಆಗಿದೆ  ಅಂತ ಗೊತ್ತಾದ ಮೇಲೆ ಈ ಮೊಟ್ಟೆ ಹುಡುಗನ ಗುಣವೇ ಮೇಲು ಎನಿಸುತ್ತೆ ಆಕೆಗೆ. ಇನ್ನೊಂದು ಕಡೆ  ಬೋಳುತಲೆಗಳನ್ನೇ ಬಂಡವಾಳವಾಗಿಟ್ಟು  ಕೊಂಡು ತನ್ನ ಕೆಲಸ ಸಾಧಿಸಿಕೊಳ್ಳಲು ಜನರ ಹಾದಿತಪ್ಪಿಸುವ ಹುಡುಗಿ.  ಅಮಾಯಕರನ್ನ ಹಾದಿತಪ್ಪಿಸುವ ಸಮಾಜದ ಕೆಲವು ಕಪಟಿ ಜನರಿಗೆ ಒಳ್ಳೆ ಉದಾಹರಣೆ ಯಾಗುತ್ತಾಳೆ.

 ಈ ಮೊಟ್ಟೆ ಹುಡುಗನಿಗೂ ಅಷ್ಟೇ,,ನನ್ನನ್ನು ಮೊದಲು ಎಸ್ಟೋ  ಜನ ಹುಡುಗಿಯರು ರಿಜೆಕ್ಟ್ ಮಾಡಿದ್ರು ಅನ್ನೋದನ್ನು ಮರೆತು, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಮಾತಿನಂತೆ ,,ಈತನನ್ನ ಇಷ್ಟಪಟ್ಟು, ಮನಸಾರೆ ಮದುವೆಯಾಗಲು ಒಪ್ಪಿಗೆ ಕೊಟ್ಟು, ತನ್ನ ಜೊತೆ ಎಂಗೇಜ್ ಮೆಂಟ್ ಆದ ಹುಡುಗಿ ದಪ್ಪ ಎಂದು, ಆಕೆಯನ್ನ ಮದುವೆಯಾದ್ರೆ  ಜೀವನವೇ ಜಿಗುಪ್ಸೆಯಾಗುತ್ತೆ ಅಂತ ಒಳಗೊಳಗೇ ಹಿಂಸೆ  ಪಡುತ್ತಿರುತ್ತಾನೆ. ಕೊನೆಗೊಂದು ದಿನ ಆಕೆಯೊಂದಿಗೆ ಮದುವೆಯನ್ನ ಮುರಿದುಕೊಳ್ಳುತ್ತಾನೆ. ಆಮೇಲೆ ತಾನು ಮಾಡಿದ್ದು  ತಪ್ಪು ಎಂದು ತಿಳಿದು  ಮತ್ತೆ ಆಕೆಯನ್ನೇ ಮದುವೆಯಾಗಲು ಚಡಪಡಿಸುವ ಪರಿ  ನೈಜತೆಯಿಂದ ಚಿತ್ರಿಸಿದ್ದಾರೆ.


ಮೊಟ್ಟೆ ನಾಯಕನ ಮನಸ್ಸು ಬದಲಾಯಿಸುವಲ್ಲಿ ಮುಖ್ಯ ಅನ್ನಿಸುವ ಪ್ರಸಂಗ ಎಂದರೆ ಕಾಲೇಜಿನಲ್ಲಿ ಈ ಮೊಟ್ಟೆಯ ಆಪ್ತ ಶ್ರೀನಿವಾಸ ಒಮ್ಮೆ ಆತನ ಮನೆಗೆ ಊಟಕ್ಕೆ ಕರೆಯುತ್ತಾನೆ. ಅವರ ಮನೆಗೆ ಹೋದಾಗ ಗೊತ್ತಾಗುತ್ತೆ ಆತನ ಹೆಂಡತಿ ಮೂಕಿ ಅಂತ.  ಆತನದು ಕೂಡ ಲವ್ ಮ್ಯಾರೇಜ್ ಅಂತ ನಾಯಕನಿಗೆ ಗೊತ್ತಿರುತ್ತೆ. ಆತ ಶ್ರೀನಿವಾಸನನ್ನು ಕೇಳುತ್ತಾನೆ ತಿಳಿದು ತಿಳಿದು ಮೂಕಿಯನ್ನ ಹೇಗೆ ಲವ್ ಮಾಡಿ ಮದುವೆ ಆದಿರಾ ಅಂತ. ಆಗ ಶ್ರೀನಿವಾಸ ಕೊಡುವ ಉತ್ತರ   ಜೀವನ ನಡೆಸಲು ಸೌಂದರ್ಯ ಮುಖ್ಯವಲ್ಲ, ಪ್ರೀತಿ ಮುಖ್ಯ, ಹೊಂದಿಕೊಂಡು ಹೋಗುವ ಮನಸ್ಸು ಇನ್ನು ಮುಖ್ಯ ಎಂದು. ಆ ಸಂದರ್ಭ ಪ್ರತಿಯೊಬ್ಬರ ಕಣ್ಣಿನ ಅಂಚಲ್ಲಿ ನೀರು ತರಿಸದೆ ಇರಲಾರದು. 

ಇದು ನಾನು ನೋಡಿದ ಒಂದು ಮೊಟ್ಟೆಯ ಕಥೆ ಸಿನೆಮಾದ ಬಗೆಗಿನ ನನ್ನ ಮಾತುಗಳು. 
  


Tuesday, 25 April 2017

ಬಸವನಬ್ಬವೋ ಅತ್ವ ಬಸವ ಜಯಂತಿಯೋ?

ಆಡುಮಾತಿನಲ್ಲಿ "ಬಸವನಬ್ಬ" ಅಂತ ಕರಯಲ್ಪಡುವ "ಬಸವಣ್ಣ ಹಬ್ಬ", ಯಾವಾಗಲು ನಮಗೆ ಬೇಸಿಗೆ ರಜೆ (ಏಪ್ರಿಲ್ - ಮೇ ತಿಂಗಳು) ಇರುವಾಗಲೇ ಬರುತಿತ್ತು. ಈ ಹಬ್ಬ ಒಂದೊಂದು ಕಡೆ ಒಂದೊಂದು ರೀತಿ ಆಚರಿಸುತ್ತಾರೆ. ನಾನು ಚಿಕ್ಕವಳಿದ್ದಾಗಿನಿಂದಲೂ ಈ ಬಸವನಬ್ಬ ಎಂದರೆ, ಬೆಳಿಗ್ಗೆ ಎದ್ದು ಮನೆ ಗುಡಿಸಿ-ಸಾರಿಸಿ, ಮನೆ ಹೊರಗಲ್ಲದೆ ಅಡುಗೆ ಮನೆ ಒಲೆಗೆ ರಂಗೋಲಿ ಹಾಕಿ, ಹರಿಶಿನ ಕುಂಕುಮ ಬೊಟ್ಟು ಇಟ್ಟು, ಪೂಜೆ ಮಾಡಿ ಅಡುಗೆ ಮಾಡಲು ಶುರು ಮಾಡೋದು. ಇದು ಹೆಣ್ಣು ಮಕ್ಕಳು ಮಾಡುತ್ತಿದ್ದ ಕೆಲಸ. ಗಂಡು ಮಕ್ಕಳು ಮನೆಯಲ್ಲಿ ಇದ್ದ ಹಸು, ಕರು, ಎತ್ತುಗಳಿಗೆ ಮೈ ತೊಳೆದು ಅವುಗಳ ಕೋಡುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿ ಅವುಗಳಿಗೆ ಪೂಜೆ ಮಾಡೋರು. ಅವತ್ತು ಎತ್ತು ಮತ್ತು ಹಸುಗಳು ದನಿನ ಮನೆ(ಕೊಟ್ಟಿಗೆ)ಯಿಂದ ನಡುಮನೆವರೆಗೆ ಕರೆದುಕೊಂಡು ಬಂದು ಪೂಜೆ ಮಾಡಿ ಎಡೆ ತಿನ್ನಿಸುತ್ತಿದ್ದರು. ಅವುಗಳ ಕೊರಳಿಗೆ, ಕಾಲಿಗೆ ದಾರ ಕಟ್ಟೋದು. ಗೆಜ್ಜೆ ಕಟ್ಟೋದು ಇವೆಲ್ಲ ನಡೀತಿದ್ವು. ಊರ ಮುಂದಿನ ಬಸವಣ್ಣನ ಗುಡಿಗೆ ಎಣ್ಣೆ-ಬತ್ತಿ-ಹೂ-ಊದುಬತ್ತಿ-ಕರ್ಪೂರದ ಜೊತೆ ಎಡೆಯನ್ನ ಮನೆಯಿಂದ ತೊಗೊಂಡೋಗಿ ಪೂಜೆ ಮಾಡಿಕೊಂಡು ಬರೋರು. ಅವತ್ತಿನ ದಿನ ದನಕರುಗಳಿಗೆ ಹೊಡೆಯುವಂತಿರಲಿಲ್ಲ, ನೇಗಿಲು ಹೂಡುವಂತಿರ್ಲಿಲ್ಲ, ಮುಸುರೆ ಕುಡಿಸುತ್ತಿರಲಿಲ್ಲ. ಇದು ಬಸವನ ಹಬ್ಬದಲ್ಲಿ ಕಟ್ಟು ಬಧ್ಧ ನಿಯಮವಾಗಿತ್ತು.  ನಾನು ಚಿಕ್ಕವಳಿಂದ ನೋಡಿಕೊಂಡು ಬಂದ ಬಸವನ ಹಬ್ಬ ಹಿಂಗಿತ್ತು . ಈಗಲೂ ಊರುಗಳಲ್ಲಿ ಬಸವನಹಬ್ಬ ಆಚರಣೆ ಹೀಗೇ ಇದೆ.
ಒಂದ್ಸಲ, ಈ ಹಬ್ಬ ಯಾಕೆ ಮಾಡ್ತಾರೆ?  ಈ ಹಬ್ಬದ ದಿವ್ಸ ಎತ್ತು, ಹಸುಗಳಿಗೆ ಮಾತ್ರ ಯಾಕೆ ಪೂಜೆ? ಎಮ್ಮೆಗೆ ಯಾಕೆ ಪೂಜೆ ಮಾಡಲ್ಲ? ಅಂತ  ನಮ್ಮ ಅಜ್ಜಿಯನ್ನ ಕೇಳಿದ್ದೆ!. ಆಗ ನಂಗೆ ಸಿಕ್ಕ ಉತ್ತರ ಏನಪಾಂದ್ರೆ, "ಈ ದಿನ ಶಿವನ ವಾಹನ ನಂದಿ ಹುಟ್ಟಿದ್ದಿನ. ನಾವೆಲ್ಲಾ ರೈತರು ಬೇಸಾಯಕ್ಕೆ ಅಂತ ಎತ್ತಿಗೆ ಎಷ್ಟು ಕಷ್ಟ ಕೊಡುತ್ತೀವಿ ತಾನೇ? ಅದಕ್ಕೇ, ಅವನು ಹುಟ್ಟಿದ ದಿನನಾದ್ರೂ ನಾವು ಅವನ ಸೇವೆ ಮಾಡೋಕೋಸ್ಕರ ಈ ಹಬ್ಬ ಮಾಡುತ್ತಾರೆ" ಅಂತ ಅವರ ಅಜ್ಜಿ  ಹೇಳಿದ್ದನ್ನ ನನ್ನಜ್ಜಿ ಗೌರಜ್ಜಿ ನಂಗೆ ಹೇಳಿದಳು. ನಂತರ ನನ್ನ ತಲೇಲಿ ಇನ್ನೊಂದ್ ಪ್ರಶ್ನೆ ಬಂತು. ಮತ್ತೆ ಅಜ್ಜಿ ಕೇಳ್ದೆ. ಇವತ್ತು ಎತ್ತಿನ ಪೂಜೆ, ಎಮ್ಮೆಗೆ ಯಾವತ್ತು  ಪೂಜೆ ಅಂತ? ನನ್ನಜ್ಜಿಗೆ ಕೋಪ ಬಂತು ನೋಡಿ. 'ಮಾರಿ ಹಬ್ಬ ಮಾಡ್ತಾರಲ್ಲ ಅವರನ್ನ ಹೋಗಿ ಕೇಳು'. ಅಂತ ಕೋಪ ಮಾಡ್ಕೊಂಡ್ ಹೇಳಿದ್ರು. ನಾನು ಯಾಕೋ ಇನ್ನು ಮಾತು ಮುಂದುವರೆಸಿದರೆ ಏಟು ಗ್ಯಾರಂಟಿ ಅಂತ ಅಲ್ಲಿಂದ ಕಾಲ್ಕಿತ್ತಿದ್ದೆ!.ನಾನು ಡಿಗ್ರಿ ಓದೋಕೆ ಅಂತ  ಬೆಂಗಳೂರಿಗೆ ಬಂದಾಗ, ಇಲ್ಲಿ ಆಚರಿಸುವ ಬಸವನಹಬ್ಬ ಬೇರೆಯದೇ ರೀತಿಯಾಗಿತ್ತು. ಸರ್ಕಾರಿ ರಜೆ, ಜಗಜ್ಯೋತಿ ಬಸವಣ್ಣನವರ  ಫೋಟೋ ಅತ್ವ ವಿಗ್ರಹಕ್ಕೆ ಹಾರ ಹಾಕಿ, ಅವರು ಹುಟ್ಟಿದ ದಿನ ಎಂದು "ಬಸವ ಜಯಂತಿ" ಅನ್ನೋ ಹೆಸರಲ್ಲಿ ಆಚರಿಸುವ ಪಧ್ಧತಿ!. ಬಸವಣ್ಣನವರ ಹುಟ್ಟು, ಜೀವನ ಸಾಧನೆ, ಆದರ್ಶಗಳ ನೆನಪು!. ವಚನಗಳ ಸಾರ ಇವುಗಳನ್ನು ಸ್ಮರಿಸಿಕೊಳ್ಳುವ ದಿನ!

ಈ ಬಗ್ಗೆ ವಿಚಾರಿಸೀ ನೋಡಿದಾಗ ತಿಳಿದದ್ದು... ಈ ಎರಡೂ ಆಚರಣಾ ವಿಧಾನಗಳು ಒಂದೇ ದಿನ ಮಾಡ್ತಾರೆ ಅಂತ.  ನಾವು ಹಳ್ಳಿಗಳಲ್ಲಿ ಮಾಡುವ ಬಸವನಹಬ್ಬ ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದದ್ದು. ಆದರೆ ಕ್ಯಾಲೆಂಡರ್ನಲ್ಲಿ ನೋಡುವ ಸರಕಾರೀ ಬಸವಜಯಂತಿಯು ಇತ್ತೀಚಿಗೆ ಶುರುವಾದದ್ದು. ಮುರುಘಾ ಮಠದ ಮೃತ್ಯುಂಜಯ ಸ್ವಾಮೀಜಿ ಮತ್ತು 'ಕರ್ನಾಟಕದ ಗಾಂಧಿ' ಎಂದೇ ಹೆಸರಾಗಿರುವ ಹರ್ಡೇಕರ ಮಂಜಪ್ಪ ಬಸವ ಜಯಂತಿ ಆಚರಣೆಯನ್ನು ಶುರುಮಾಡಿದರು. ಹರ್ಡೇಕರ್ ಮಂಜಪ್ಪನವರು ಅಂದಿನ ಅನೇಕ ವಿದ್ವಾಂಸರಿಗೆ ಮತ್ತು ಜ್ಯೋತಿಷ್ಯಶಾಸ್ತ್ರಜ್ಞರಿಗೆ ಪತ್ರಗಳನ್ನು ಬರೆದು ಬಸವಣ್ಣನವರ ಹುಟ್ಟಿದ ದಿನವನ್ನ ಕಂಡು ಹಿಡಿಯಲು / ಗುರ್ತಿಸಲು ಕೇಳಿಕೊಂಡರು. ಭೀಮಕವಿಯ "ಬಸವ ಪುರಾಣ" ದ ಷಟ್ಪದಿಯಾ ಆಧಾರದ ಮೇಲೆ  ಬಸವಣ್ಣನವರು, ಆನಂದನಾಮ ಸಂವತ್ಸರದಲ್ಲಿ,  ಚಾಂದ್ರಮಾನ ಲೆಕ್ಕದ, ವೈಶಾಖ ಮಾಸ - ರೋಹಿಣಿ ನಕ್ಷತ್ರ (ವೃಷಭ ರಾಶಿ) ದಲ್ಲಿ ಹುಟ್ಟಿದರು ಮತ್ತು ಅಂದು "ಅಕ್ಷಯ ತೃತೀಯ" ಹಬ್ಬವಾಗಿತ್ತು ಎಂದು ಕಂಡು ಕೊಂಡರು. ಇದು ಆದುನಿಕ ಕ್ಯಾಲೆಂಡರ್ ಪ್ರಕಾರ ದಿನಾಂಕ 30 ಮಾರ್ಚ್ 1134 ಎಂದೂ ಲೆಕ್ಕ ಹಾಕಲಾಯಿತು. ಬಸವಣ್ಣನವರು ಹುಟ್ಟಿದ ವರ್ಷ 1105 ಎಂದೂ ಹಲವು ಪ್ರಮುಖ ಗ್ರಂಥಗಳಲ್ಲಿ ನಮೂದಾಗಿದೆ. ಬಸವಣ್ಣ ಹುಟ್ಟಿದಂದಿನಿಂದ ಶುರುವಾದ ಬಸವ ಶಕೆ ಇಂದಿಗೂ ಬಳಕೆಯಲ್ಲಿದೆ ಮತ್ತು  ಪಂಚಾಂಗಗಳಲ್ಲಿ ಅನೂಚಾನವಾಗಿ ಈ ಬಸವಶಕೆಯ ವರ್ಷಗಳು ಬಳಕೆಯಾಗುತ್ತ ಬಂತು. ಇದು (ಆಧುನಿಕ ವರ್ಷ 2017) ಬಸವ ಶಕೆ 884.

ದಾವಣಗೆರೆಯಲ್ಲಿ ಬಸವಜಯಂತಿಯನ್ನ ಮೊದಲ ಬಾರಿಗೆ - 1913ರಲ್ಲಿ ಆಚರಿಸಲಾಯಿತು. ನಂತರ ಇದು ಕರ್ನಾಟಕದ ತುಂಬಾ ಪ್ರಸಿದ್ದಿಯಾಯಿತು ಮತ್ತು ಮೂಲೆ ಮೂಲೆಗಳಲ್ಲಿ ಆಚರಣೆಯಾಗ್ತಾ ಬಂತು. ಮುಂದೆ ಕರ್ನಾಟಕ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಈ ದಿನವನ್ನು ಸರ್ಕಾರಿ ದಿನಗಳಾಗಿ ಘೋಷಣೆ ಮಾಡಿದವು ಮತ್ತು ಸರ್ಕಾರದ ಮೂಲಕವೂ ಆಚರಣೆ ಮಾಡುತ್ತಾ ಬಂದವು.
ಪಾಲ್ಗುರಿಕೆ ಸೋಮನಾಥ ತೆಲುಗಿನಲ್ಲಿ, ನಂತರ ಭೀಮ ಕವಿ ಕನ್ನಡದಲ್ಲಿ "ಬಸವಪುರಾಣ" ಬರೆದವರು. ಹರಿಹರನೂ ಸೇರಿಕೊಂಡು ಬಸವಣ್ಣನವರ ಬಗ್ಗೆ ಅಗಣಿತ ಜನರು ವಚನ, ಪುರಾಣ, ಮಹಾಕಾವ್ಯ, ರಗಳೆ ಷಟ್ಪದಿ, ಕತೆ ಕಾದಂಬರಿ ಇತ್ಯಾದಿ ಸಾಹಿತ್ಯಗಳನ್ನ ಹುಟ್ಟು ಹಾಕಿ ಕನ್ನಡ, ತೆಲುಗು, ತಮಿಳು ಸಂಸ್ಕೃತ ಸಾಹಿತ್ಯವನ್ನ ಸಮೃದ್ದಗೊಳಿಸಿದ್ದಾರೆ.         

ಇತರರಿಗೆ ಬಸವಣ್ಣನವರು ಹೇಗೆ ಕಂಡಿದ್ದಾರೆ ಎಂದು ಅವರ ಮಾತುಗಳಲ್ಲೇ ಇಲ್ಲಿ ಕೊಟ್ಟಿದ್ದೇನೆ. 

ಜನಪದರಲ್ಲಿ ಬಸವಣ್ಣ 
ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು ಶಿವಬೆಳಕ| 
ನಾಡೊಳಗೆ ಸೊಲ್ಲೆತ್ತಿ ಜನವು ಹಾಡುವುದು||

ಪುರಾಣಗಳಲ್ಲಿ ಬಸವಣ್ಣ
ಭೀಮ ಕವಿ, ಪಾಲ್ಗುರಿಕೆ ಸೋಮನಾಥರಂತವರು ಪುರಾಣಗಳನ್ನು ರಚಿಸಿದ್ದಾರೆ.  ವೇದ ವ್ಯಾಸ ರಚಿತ ಬಸವ ಪುರಾಣ" ವೂ ಸಿಕ್ಕಿದೆ!.   

ವಚನಗಳಲ್ಲಿ ಬಸವಣ್ಣ 
ಆಯತದಲ್ಲಿ ಪೂರ್ವಾಚಾರಿಯ ಕಂಡೆ.
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ.
ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ.
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,
ಶ್ರೀಪಾದಕ್ಕೆ ನಮೋ ನಮೋ ಎಂಬೆನು.

ಶಿವ ತಾನೀತ ಮತ್ರ್ಯಲೋಕವ ಪಾವನವ ಮಾಡಲು,
ಗುರು ತಾನೀತ ಎನ್ನ ಭವರೋಗವ ವೇಧಿಸಲು,
ಭಕ್ತ ತಾನೀತ ಎನಗೆ ವಿಸ್ತಾರವಾಗಿ.
ಎನಗೆ ಜಂಗಮ ತಾನೀತ ಅನಾದಿ ಸಂಸಿದ್ಧ ಘನಮಹಿಮನಾಗಿ.
ಲಿಂಗ ತಾನೀತ ಎನಗೆ ಪ್ರಾಣಲಿಂಗ ತಾನಾಗಿ.
ಎನ್ನ ವಿಸ್ತಾರ ತಾನೀತ ಎನ್ನ ನಿಲುಕಡೆಯ ತಾನಾಗಿ.
ಎನ್ನ ಸರ್ವಸ್ವಾಯತವ ಮಾಡಿದ ಮಹಿಮ ತಾನೀತ ಕಾಣಾ,ಕಲಿಗೆದೇವರದೇವ, ನಿಮ್ಮ ಶರಣ ಬಸವಣ್ಣ.

ಬಸವ ಎಂದೊಮ್ಮೆ ಮನವೊಸೆದು ನೆನೆದಡೆ
ಬಸವ ಅಸುವಿಂಗೆ ಅಸುವಾಗಿ ತೋರ್ಪನೈಸೆ
ಬಸವ ನಾಮವ ಬಿಡದೆ ರಸನೆಯೊಳಾವಾಗ
ಬಸವ ಬಸವ ಎಂಬೆ ಯೋಗಿನಾಥ
ಶಾಸನಗಳಲ್ಲಿ ಬಸವಣ್ಣ 
ಅನೇಕ ಶಾಸನಗಳು "ಓಂ ಬಸವ ಲಿಂಗಾಯ ನಮ:" ಅನ್ನೋ ಪೀಟಿಕೆಯಿಂದ ಶುರುವಾಗುತ್ತವೆ.  ಉದಾಹರಣೆ ಶಾಲಿವಾಹನ ಶಕೆ 1530ರ ಕೊಟ್ಟೂರು ಶಾಸನ. ಬಸವಣ್ಣನವರ ಜೀವನದ ಬಗ್ಗೆ ತಿಳಿಸಿಕೊಡುವ ಶಾಸನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.  

ಸರ್ವಜ್ಞನ ತ್ರಿಪದಿಗಳಲ್ಲಿ ಬಸವಣ್ಣ 
ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ
ಬಸವನೇ ಕರ್ತ ಸರ್ವಜ್ಞ

ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು
ಬಸುರಲ್ಲಿ ಬಂದ ಶಿಶು ಮುದ್ದು – ಲೋಕಕ್ಕೆ
ಬಸವಣ್ಣನೇ ಮುದ್ದು ಸರ್ವಜ್ಞ

ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ
ಮಂತ್ರಸಿದ್ಧನು ಬಸವಣ್ಣನ| ಪಾದಕ್ಕೆ
ಶರಣೆನ್ನಿರೆಲ್ಲ ಸರ್ವಜ್ಞ||

ಆಧುನಿಕ (ಕುವೆಂಪು) ರಲ್ಲಿ ಬಸವಣ್ಣ 
ಕಾರ್ತಿಕದ ಕತ್ತಲಲ್ಲಿ
ಆಕಾಶ ದೀಪವಾಗಿ ನೀ ಬಂದೆ,
ಬಟ್ಟೆಗೆಟ್ಟವರಿಗೊಂದು ದೊಂದು ದಿಕ್ಕಾಗಿ,
ಎಂಟು ಶತಮಾನಗಳ ಹಿಂದೆ
ಅಗ್ನಿ ಖಡ್ಗವನಾಂತು,
ಓ ಆಧ್ಯಾತ್ಮ ಕ್ರಾಂತಿ ವೀರ,
ದೇವ ದಯೆಯೊಂದು ಹೇ
ಧೀರಾವತಾರ ಶ್ರೀ ಗುರು
ಬಸವೇಶ್ವರ, ಶ್ರೀ ಬಸವೇಶ್ವರ, ಶ್ರೀ ಬಸವೇಶ್ವರ

ಆಧುನಿಕ (ಮಹಾತ್ಮ ಗಾಂಧಿಜಿ) ರಲ್ಲಿ ಬಸವಣ್ಣ 
“It has not been possible for me to practice principles of Basaveshwara   which he taught 800 years ago and which he also practiced. I have adopted few of them; I am yet to a seeker in this aspect and not an accomplished one. Eradication of untouchability & dignity of labour were among his core concepts one does not find even shade of castism in him.  Had he lived during our times, he would have been a saint worthy of worship. If his followers practice his precepts you could uplift not just Bharat but the world.”


ನನಗಿಷ್ಟವಾದ ಕೆಲವು ಬಸವಣ್ಣನವರ ವಚನಗಳೊಂದಿಗೆ ಈ ಬರಹವನ್ನ ಮುಗಿಸ್ತಾ ಇದ್ದೀನಿ.
ಅರಿವುವಿಡಿದು, ಅರಿವನರಿದು,
ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ,
ಮರಹುವಿಡಿದು, ಮರಹ ಮರೆದು,
ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ.
ದೇಹ ಪ್ರಾಣಂಗಳ ಹಿಂಗಿ, ದೇಹವಿಡಿದು,
ದೇಹ ನಿಮ್ಮದೆಂಬ ಭ್ರಾಂತುಸೂತಕಿ ನಾನಲ್ಲವಯ್ಯಾ.
ನಿಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ
ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ.

ಆತ್ಮನ ನಿಜವನರಿಯದು
ಪರಮಾತ್ಮನ ಲಿಂಗವು ತಾನೆಂದರಿದ ಶರಣಂಗೆ
ಎಂತಿರ್ದಂತೆ ಪೂಜೆ ನೋಡಾ !
ಭೋಗಿಸಿದುದೆಲ್ಲವು ಶಿವಾರ್ಪಿತ
ಶರಣ ರುಚಿಸಿದುದೆಲ್ಲವು ಪ್ರಸಾದ
ಶರಣನರಿದುದೆಲ್ಲವು ಪರಬ್ರಹ್ಮ
ಶರಣ ನುಡಿದುದೆಲ್ಲವು ಪರತತ್ವ
ಶರಣ ತಾನೆ ಕೂಡಲಸಂಗಮದೇವ.

ದೇವಲೋಕ ಮತ್ರ್ಯಲೋಕವೆಂಬ ಸೀಮೆಯುಳ್ಳನ್ನಕ್ಕ
ಕೇವಲ ಶರಣನಾಗಲರಿಯ.
ಸತ್ತು ಬೆರಸಿಹೆನೆಂದಡೆ ಕಬ್ಬಿನ ತುದಿಯ ಮೆಲಿದಂತೆ
ಕೂಡಲಸಂಗಮದೇವಾ.

ಅರಿವು ಮರವೆಯೊಳಡಗಿ, ಮರವೆ ಅರಿವಿನೊಳಡಗಿ,
ತೆರಹಿಲ್ಲದಿರ್ದೆನೆಂಬ ಹಮ್ಮಿದೇನೋ, ಹಮ್ಮಿದೇನೋ
ಬ್ರಹ್ಮಾದ್ ಬ್ರಹ್ಮವ ನುಂಗಿ, ಮತ್ತಾ ಪರಬ್ರಹ್ಮನು ತಾನೆಂದೆಂಬ
ಹಮ್ಮಿದೇನೊ, ಹಮ್ಮಿದೇನೊ
ಆದಿ ಶೂನ್ಯವು ಶೂನ್ಯ, ಮಧ್ಯ ಶೂನ್ಯವು ಶೂನ್ಯ,
ಅಂತ್ಯ ಶೂನ್ಯವು ಶೂನ್ಯ,
ಶೂನ್ಯವಾದ ಬಳಿಕ ಅಲ್ಲಿಂದತ್ತ ನಿಂದ ನಿಲವನಾರು ಬಲ್ಲರು ಹೇಳಾ
ಬಯಲು ಚಿತ್ರಿಸಿದ ಚಿತ್ರವನಾ ಬಯಲರಿಯದಂತೆ
ಕೂಡಲಸಂಗಮದೇವಾ, ನಿಮ್ಮ ಶರಣರ ನಿಲವು.

Friday, 21 April 2017

ಪಂಚಾಂಗ - ಜ್ಯೋತಿಷ ಶಾಸ್ತ್ರ, ಪುರಾಣ - ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯ


ಆಡುಮಾತಿನಲ್ಲಿ "ಅಕ್ಷತದಿಗೆ" ಎಂದು ಕರೆಸಿಕೊಳ್ಳುವ 'ಅಕ್ಷಯತೃತೀಯ'ದ ದಿನ ಪುರಾತನ ಕಾಲದಿಂದಲೂ ವಿಶೇಷತೆಯನ್ನು ಪಡೆಯುತ್ತಾ ಬಂದಿದೆ. ಈ ದಿನ ಜನರು ಆಸ್ತಿ, ಚಿನ್ನಬೆಳ್ಳಿ ಕೊಳ್ಳಲು, ಒಳ್ಳೆಕೆಲಸ ಪ್ರಾರಂಭ ಮಾಡಲು ಒಳ್ಳೆಯ ದಿನ ಎಂದು ಹೇಳುವರು. ಈ ಅಕ್ಷಯ ತೃತೀಯ ದಿನ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಮತ್ತು ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಈ ದಿನ  ಕುಬೇರ, ವಿಷ್ಣು, ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ಯನ್ನು ಪೂಜಿಸಿದರೆ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಈ ದಿನದಂದು ಬೆಳ್ಳಿ ಬಂಗಾರದ ಅಂಗಡಿಗಳಲ್ಲಿ ವ್ಯಾಪಾರ ತುಂಬಾ ಜೋರಾಗಿ ನಡೆಯುತ್ತದೆ. ಅಕ್ಷಯ ತೃತೀಯದಂದು ಶುಭಕಾರ್ಯಗಳನ್ನು ಮಾಡಿದರೆ ಹಾಗೂ ದಾನ ಮಾಡಿದರೆ ಹೆಚ್ಚಿನ ಪ್ರತಿಫಲ ಉಂಟಾಗುವುದೆಂಬ ಪ್ರತೀತಿಯಿದೆ. ನಮ್ಮ ಹೆಣ್ಣುಮಕ್ಕಳು ಒಡವೆಯನ್ನು ಖರೀದಿಸಲು ತುಂಬಾ ಇಷ್ಟ ಪಡುತ್ತಾರೆ. ಏಕೆಂದರೆ ಅದು ಕೂಡ ಅಪತ್ಕಾಲಕ್ಕೆ ನೆರವಾಗುವ ಆಸ್ತಿಯಲ್ಲವೇ. ಹಾಗೇ ಹೆಣ್ಣಿನ ಸೌದರ್ಯದ ಮತ್ತು ಹೆಮ್ಮೆಯ ಪ್ರತೀಕ ಈ ಒಡವೆ. ಅಲ್ಲದೇ ಈ ನಂಬಿಕೆ ತಲಾಂತರಗಳಿಂದ ಇಷ್ಟು ಗಟ್ಟಿಯಾಗಿ ಜನರು ನಂಬಿಕೊಂಡು ಬಂದಿದ್ದಾರೆಂದರೆ ಏನು ಅರ್ಥ?  ಆ ದಿನದ ಮಹಿಮೆಯಿಂದ  ನಂಬಿದವರ ಜೀವನದಲ್ಲಿ ಒಳ್ಳೆಯದು ಆಗಿದೆ ಎಂದೇ ಅರ್ಥ. ಅಲ್ಲವೇ? ನಮ್ಮ ಭಾರತೀಯ ಪಂಚಾಗ ಸುಮ್ಮನೆ ಬಂದಿಲ್ಲ ಅದು ಒಂದು ವಿಜ್ಞಾನ. ಎನ್ನುವುದಕ್ಕೆ ಇದು ಕೂಡ ಒಂದು ಸಾಕ್ಷಿ.

ವೈಶಾಖ ಮಾಸದ - ಶುಕ್ಲ ಪಕ್ಷದ - ಮೂರನೇ ದಿನವೇ 'ಅಕ್ಷಯ ತೃತೀಯ'. ಹಿಂದುಗಳ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ನಾಲ್ಕು "ಪೂರ್ಣಮುಹೂರ್ತ" ಗಳಲ್ಲಿ  (ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಹಬ್ಬದ ದಿನಗಳು) ಇದು ಒಂದು. ಈ ದಿನಗಳಲ್ಲಿ  ಒಳ್ಳೆಯ ಕೆಲಸ ಮಾಡಲು  ಪಂಚಾಂಗ ನೋಡುವ ಅವಶ್ಯಕತೆ ಇರುವುದಿಲ್ಲ ಎಂದು ನಮ್ಮ ಹಿರಿಯರು ಹೇಳಿದ ನೆನಪು. ಈ ದಿವಸ ಸಾಮಾನ್ಯವಾಗಿ ಯಾವುದೇ ಒಳ್ಳೆ  ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣದಲ್ಲಿದೆ.

ಪಂಚಾಂಗದಲ್ಲಿ ಅಕ್ಷಯ ತೃತೀಯ 
ಅಕ್ಷಯ ತೃತೀಯದಂದು  ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ತಮ್ಮ ತಮ್ಮ ಶಕ್ತಿಯುತಸ್ಥಾನ - ಉಚ್ಚರಾಶಿಯಲ್ಲಿ (ಸೂರ್ಯ - ಮೇಷರಾಶಿಯಲ್ಲಿ ಮತ್ತು ಚಂದ್ರ - ವೃಶಭಾರಾಶಿಯಲ್ಲಿ) ಇರುವದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಸೂರ್ಯನು  ಆತ್ಮ ಮತ್ತು ದೇಹ ಪ್ರತಿಬಿಂಬಿಸಿದರೆ, ಚಂದ್ರನು  ಮನಸ್ಸುಮತ್ತು ಬುಧ್ಧಿ ಮೇಲೆ ಪ್ರಭಾವ ಬೀರುತ್ತಾನೆ. ಈ ರೀತಿಯಾಗಿ  ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಎಂದು ಹೇಳುವರು.

ಅಕ್ಷಯ ತೃತೀಯ ಹಬ್ಬದ ದಿನವನ್ನ ಹೇಗೆ ಲೆಕ್ಕ ಹಾಕುತ್ತಾರೆ.
ಈ ಹಬ್ಬವನ್ನ ಚಂದ್ರ ಮತ್ತು ಸೂರ್ಯ ಇಬ್ಬರೂ ತಮ್ಮ ತಮ್ಮ ಉಚ್ಚ ರಾಶಿಯಲ್ಲಿ ಇರುವ ದಿನದಂದು ಆಚರಿಸುತ್ತಾರೆ. ಸೂರ್ಯನು ತನ್ನ ಉನ್ನತ ಸ್ತಾನವಾದ ಮೇಶರಾಶಿಯಲ್ಲಿ - ಅಂದರೆ ಸೌರಮಾನ ಲೆಕ್ಕದ ಮೇಷ ಮಾಸದಲ್ಲಿ - ಪೂರ್ತಿ 30 ದಿನಗಳು ಇರುತ್ತಾನೆ. ಸೂರ್ಯ ತಿಂಗಳಿಗೊಮ್ಮೆ ರಾಶಿ ಬದಲಾಯಿಸಿದರೆ, ಚಂದ್ರ ದಿನಕ್ಕೊಮ್ಮೆ ನಕ್ಷತ್ರ ಬದಲಾಯಿಸುತ್ತಾನೆ (ಅಂದಾಜು ಎರಡೂವರೆ ದಿನಕ್ಕೊಂದು ರಾಶಿ). ಹಾಗಾಗಿ ಈ ಮೇಷ ಮಾಸದ ಯಾವ ದಿನದಂದು ಚಂದ್ರ ತನ್ನ ಉಚ್ಚ ಸ್ತಾನದಲ್ಲಿ ಇರುತ್ತಾನೋ ಅಂದೇ ಈ ಅಕ್ಷಯ ತೃತೀಯ. ಚಾಂದ್ರಮಾನ ಲೆಕ್ಕದ ಮೂಲಕ ನೋಡಿದರೆ ಈ ದಿನ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನ ಆಗಿರುತ್ತದೆ. 
ಪುರಾಣ ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯದ ವಿಶೇಷತೆ:
 • ಈ ದಿನ ಹಲವು  ಮಹತ್ಕಾರ್ಯಗಳು ಶುರುವಾದ ದಿನ 
  • ಕೃತಯುಗ (ಸತ್ಯ ಯುಗ) ಶುರುವಾದ ದಿನ ಎಂದು ಹೇಳಲಾಗುತ್ತದೆ.
  • ವೇದವ್ಯಾಸರು ಗಣಪತಿ ಆಶೀರ್ವಾದ ಪಡೆದು  ಮಹಾಭಾರತ ಬರೆಯಲು ಪ್ರಾರಂಭಿಸಿದ ದಿನ.
  • ಗಂಗಾ ಮಾತೆ ಕೈಲಾಸದಿಂದ ಭೂಮಿಗೆ ಇಳಿದ ದಿನ ಎಂದು ಹೇಳಲಾಗುತ್ತದೆ.
 • ಈ ದಿನ ಹಲವು ಮಹಾತ್ಮರು ಹುಟ್ಟಿದ ದಿನ 
  • ಜಗಜ್ಯೋತಿ ಬಸವಣ್ಣ ಹುಟ್ಟಿದ ದಿನ.
  • ಬಲರಾಮ ಜಯಂತಿ ಅನ್ನೂ ಇಂದು ಆಚರಿಸಲಾಗುತ್ತದೆ. 
  • ವಿಷ್ಣು ಪರಶುರಾಮನಾಗಿ ಅವತಾರವೆತ್ತಿದ ದಿನ.  
 • ಇನ್ನೂ ಹಲವು ಮಹತ್ ಘಟನೆಗಳು ಈ ದಿನ ನಡೆದಿವೆ ಎಂದು ಪುರಾಣಗಳು ಹೇಳುತ್ತವೆ 
  •  ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದದಿನ.
  • ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು ಈ ಅಕ್ಷಯ ತೃತೀಯದ ದಿನವೇ.
  • ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದ ದಿನ.
  • ಈ ದಿನ ವಿಷ್ಣು ಮತ್ತು ಲಕ್ಷ್ಮಿ ಗಂಗಾಸ್ನಾನ ಮಾಡಿ, ಗಂಗೆಯನ್ನು ಪುಜಿಸಿದ್ದರೆಂದು. ಅಂದಿನಿಂದ ಗಂಗಾ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆ ಎಂಬ ರೂಢಿ ಬಂದಿತು ಎಂದು ಹೇಳಲಾಗುತ್ತದೆ.
  • ಕೃಷ್ಣನು  ಕುಚೇಲನನ್ನು ಸತ್ಕರಿಸಿದ ಪುಣ್ಯ ದಿನ.
ಈ ಎಲ್ಲ ವಿಶೇಷತೆಗಳು ನಡೆದದ್ದು ಈ ಅಕ್ಷಯ ತೃತೀಯ ದಿನದಂದೇ ಎಂದು ಪುರಾಣಗಳ ಕಥೆಗಳು ಹೇಳುತ್ತವೆ. ಈ ದಿನ ಅಕ್ಷಯ ತೃತೀಯ ಆಚರಿಸಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶಿಸೋಣ. ಎಲ್ಲರ ಸಂಪತ್ತು ಅಕ್ಷಯವಾಗಲಿ. ಎಲ್ಲರಿಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು.

ಜ್ಯೋತಿಷ ಶಾಸ್ತ್ರದ ಮೂಲಕ ಅಕ್ಷಯ ತೃತೀಯ:  

ಅಕ್ಷಯ ತೃತೀಯ  ಯಾವ ನಕ್ಷತ್ರದಲ್ಲಿ ಬಂದರೆ ಹೆಚ್ಚು ಶ್ರೇಷ್ಠ ?
ಈ ಹಬ್ಬ 'ತೃತೀಯ ತಿಥಿ' (ತದಿಗೆಯ ದಿನ) ಯಲ್ಲಿ ಮತ್ತು 'ವೃಷಭ ರಾಶಿ'ಯ ದಿನ ಆಚರಣೆ ಮಾಡುತ್ತಾರೆ ಅಂತ ತಿಳೀತು. ಆದರೆ ಈ ವೃಷಭ ರಾಶಿ ಮತ್ತು ತೃತೀಯ ತಿಥಿ ಎರಡೂ ಜೊತೆಯಲ್ಲಿ ಬರುವಾಗ ಅಂದು ಮೂರು ನಕ್ಷತ್ರಗಳಲ್ಲಿ (ಕೃತಿಕಾ, ರೋಹಿಣಿ, ಮೃಗಶಿರ) ಯಾವುದಾದರೊಂದು ಬರುವ ಸಾಧ್ಯತೆ ಇದೆ.  ಅಕ್ಷಯ ತೃತೀಯ, ಶುಕ್ಲ ಪಕ್ಷದ 'ಮೂರನೇ' ದಿನ / 'ತೃತೀಯ ತಿಥಿ' ಯಲ್ಲಿ ಬರುತ್ತೆ ಅಂತ ಹೆಸರೇ ಹೇಳುತ್ತೆ.

ಟಿಪ್ಪಣಿ 1 :  7 ಗ್ರಹಗಳು 360 ಡಿಗ್ರಿ ವೃತ್ತದ ಯಾವ ಯಾವ ಡಿಗ್ರಿ ಯಲ್ಲಿ ಉಚ್ಚರಾಗಿರುತ್ತಾರೆ
 • ಸೂರ್ಯ : ಮೇಷದ 19ನೇ ಡಿಗ್ರಿ (ಅಂದರೆ 18°00' - 18°59')(ಪೂರ್ಣ ವೃತ್ತದ 19ನೆ ಡಿಗ್ರಿ);
 • ಚಂದ್ರ   : ವೃಶಭದ 3ನೇ ಡಿಗ್ರಿ; (ಪೂರ್ಣ ವೃತ್ತದ 33ನೆ ಡಿಗ್ರಿ);
 • ಗುರು    : ಕಟಕ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 105ನೆ ಡಿಗ್ರಿ);
 • ಬುಧ    : ಕನ್ಯಾ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 165ನೆ ಡಿಗ್ರಿ);
 • ಶನಿ     : ತುಲಾ ರಾಶಿಯ 21ನೆ ಡಿಗ್ರಿ; (ಪೂರ್ಣ ವೃತ್ತದ 201ನೆ ಡಿಗ್ರಿ);
 • ಮಂಗಳ : ಮಕರ ರಾಶಿಯ 28ನೆ ಡಿಗ್ರಿ; (ಪೂರ್ಣ ವೃತ್ತದ 298ನೆ ಡಿಗ್ರಿ);
 • ಶುಕ್ರ    : ಕುಂಭ ರಾಶಿಯ 27ನೆ ಡಿಗ್ರಿ; (ಪೂರ್ಣ ವೃತ್ತದ 327ನೆ ಡಿಗ್ರಿ);

ಟಿಪ್ಪಣಿ 2: ಡಿಗ್ರಿ ಲೆಕ್ಕಾಚಾರ 
 1. ಒಂದು ಪೂರ್ಣ ವೃತ್ತ = 360 ಡಿಗ್ರಿ. 
 2. ಈ 360 ಡಿಗ್ರಿ ವೃತ್ತವನ್ನ 12 (ರಾಶಿಗಳು) ಭಾಗಗಳಾಗಿ ಮಾಡಿದಾಗ ಒಂದೊಂದು ರಾಶಿಗೆ 30 ಡಿಗ್ರಿ ಆಗುತ್ತೆ.
 3. ಈ 360 ಡಿಗ್ರಿ ವೃತ್ತವನ್ನ 27 ನಕ್ಷತ್ರಗಳಿಗೆ ಹಂಚಿದರೆ ಒಂದೊಂದು ನಕ್ಷತ್ರಕ್ಕೆ 13° 20' ಬರುತ್ತೆ. 
 4. 27 ನಕ್ಷತ್ರಗಳನ್ನ 12 ರಾಶಿಗಳಿಗೆ ಹಂಚಿದರೆ ಒಂದೊಂದು ರಾಶಿಗೆ ಎರಡೂವರೆ ನಕ್ಷತ್ರಗಳು ಬರುತ್ತವೆ.
 5. ಒಂದು ನಕ್ಷತ್ರದಲ್ಲಿ ನಾಲ್ಕು ಪಾದಗಳಿರುತ್ತವೆ ಹಾಗಾಗಿ ಒಂದೊಂದು ಪಾದ 3° 20' ಜಾಗವನ್ನಾಕ್ರಮಿಸುತ್ತೆ.
 6. ಒಂದು ರಾಶಿಗೆ ಎರಡೂವರೆ ನಕ್ಷತ್ರಗಳಾದ್ದರಿಂದ ಮತ್ತು ಒಂದು ನಕ್ಷತ್ರಕ್ಕೆ 4 ಪಾದಗಳಾದ್ದರಿಂದ ಒಂದು ರಾಶಿಗೆ 10 ಪಾದಗಳು. ಇದು 13° 20' ಆಗುತ್ತೆ .    
ಉದಾಹರಣೆ:   
ಮೇಷರಾಶಿಯಲ್ಲಿ ನ 10 ಪಾದ (ಎರಡೂವರೆ ನಕ್ಷತ್ರ) ಗಳು = 4 ಅಶ್ವಿನಿ  + 4 ಭರಣಿ + 2 ಕೃತ್ತಿಕಾ = 4*3° 20' + 4*3° 20'+ 2*3° 20' = 30ಡಿಗ್ರಿ

ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ, ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರ, ಭರಣಿ ನಕ್ಷತ್ರ ಮತ್ತು ಕೃತಿಕಾದ ಮೊದಲ ಎರಡು ಪಾದಗಳು ಬರುತ್ತವೆ. ವೃಶಭ ರಾಶಿಯಲ್ಲಿ ಕೃತಿಕಾ ನಕ್ಷತ್ರ ದ ಮೂರು ಮತ್ತು ನಾಲ್ಕನೇ ಪಾದಗಳು ಮತ್ತು ರೋಹಿಣಿ, ಮೃಗಶಿರ ನಕ್ಷತ್ರಗಳು ಬರುತ್ತವೆ. ನಾವು ಮಾತಿನಲ್ಲಿ ಸೂರ್ಯ ಮೇಷರಾಶಿಯಲ್ಲಿ ಉಚ್ಚನಾಗಿರುತ್ತಾನೆ ಅಂತ ಹೇಳಿದರೂ,  ಇನ್ನೂ ಆಳಕ್ಕಿಳಿದು ನೋಡಿದರೆ ಈ ಸೂರ್ಯ ಮೇಷ ರಾಶಿಯ ಭರಣಿ  ನಕ್ಷತ್ರ (13° 20' ರಿಂದ 26° 40') ದಲ್ಲಿ  ಮಾತ್ರ ನಿಜವಾಗಿ ಉಚ್ಚ (19 ಡಿಗ್ರಿ - ಭರಣಿ ೩ನೆ ಪಾದ)  ನಾಗಿರುತ್ತಾನೆ ಅಂತ ತಿಳಿಯುತ್ತೆ.

ಸರಳೀಕರಿಸಿ ನಾವು ಚಂದ್ರನು ವೃಶಭರಾಶಿಯಲ್ಲಿ ಉಚ್ಚನಾಗಿರುತ್ತಾನೆ ಅಂತ ಹೇಳಿದರೂ, ಸರಿಯಾಗಿ ಲೆಕ್ಕ ಹಾಕಿದರೆ ಈ ಚಂದ್ರ ವೃಷಭ ರಾಶಿಯ ಕೃತಿಕಾ ನಕ್ಷತ್ರದ 3ನೇ ಪಾದದಲ್ಲಿ ತನ್ನ ನಿಜ ಉಚ್ಚ ಸ್ತಾನದಲ್ಲಿರುತ್ತಾನೆ. ಹಾಗಾಗಿ ನಮ್ಮ ಕೆಲ ಪುರಾಣಗಳಲ್ಲೂ ಕೃತಿಕ ನಕ್ಷತ್ರದಲ್ಲಿ ಬಂದ ಅಕ್ಷಯ ತೃತೀಯ ಹಬ್ಬ ಅತಿ ವಿಶೇಷ ಎನ್ನುತ್ತಾರೆ.

ಇನ್ನೊಂದು ಪುರಾಣ ಕತೆಯ ಮೂಲಕ ಯೋಚನೆ ಮಾಡೋದಾದರೆ, ಚಂದ್ರನಿಗೆ 27 ಜನ  ( ಇವೇ 27 ನಕ್ಷತ್ರಗಳು) ಹೆಂಡತಿಯರು ಅನ್ನುತ್ತಾರೆ. ಚಂದ್ರ ತನ್ನ ಪ್ರತಿ ಹೆಂಡತಿಯ ಜೊತೆ ಒಂದೊಂದು ದಿನ ಇರುತ್ತಾನೆ ಎನ್ನುವ ಕತೆ ಇದು. ಈ 27 ಹೆಂಡತಿಯರಲ್ಲಿ ರೋಹಿಣಿ ಚಂದ್ರನಿಗೆ ಪ್ರಿಯವಾದ ಹೆಂಡತಿ ಅಂತೆ. ಹಾಗಾಗಿ ಕೆಲ ಕತೆಗಳು ರೋಹಿಣಿ ನಕ್ಷತ್ರದ ದಿನ ಬಂದ (ಅಂದರೆ ಚಂದ್ರ ರೋಹಿಣಿ ನಕ್ಷತ್ರದಲ್ಲಿದ್ದಾಗ)  ಅಕ್ಷಯ ತೃತೀಯ ಶ್ರೇಷ್ಠ ಅನ್ನುವ ನಂಬಿಕೆ ಹೊಂದಿದ್ದಾರೆ. ಸೋಮವಾರ ಚಂದ್ರನ ವಾರವಾದ್ದರಿಂದ, ಈ ತದಿಗೆಯಂದು ರೋಹಿಣಿ ನಕ್ಷತ್ರವಿದ್ದು ಸೋಮವಾರವಾಗಿದ್ದರೆ ಇನ್ನೂ ಹೆಚ್ಚು ಶ್ರೇಷ್ಠ ಅನ್ನುವ ನಂಬಿಕೆ ಇದೆ.                

(ಚಿತ್ರಗಳು;ಗೂಗಲ್ಲಿನಿಂದ)

Tuesday, 18 April 2017

ಇತ್ತೀಚಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದೀರಾ? ಕಾರಣ ಏನಿರಬಹುದು?

ಇತ್ತೀಚಿಗೆ ದೈಹಿಕವಾಗಿ  ಮತ್ತು ಮಾನಸಿಕವಾಗಿ ಕುಗ್ಗಿದ್ದೀರಾ?. ಡಿಪ್ರೆಶನ್, ಸಣ್ಣ ಸಣ್ಣದಕ್ಕೆಲ್ಲ ಸಿಟ್ಟು-ಸೆಡವು-ಅಸಮಾಧಾನ-stress ಮುಂತಾದ ಮಾನಸಿಕ ತೊಂದರೆಗಳು ನಿಮ್ಮನ್ನ ಕಾಡ್ತಾಯಿದಾವಾ?  ನೆನಪಿನಶಕ್ತಿ ಮೊದಲಿಗಿಂತ ಕಮ್ಮಿ ಆಗಿದೆ ಅನ್ಸುತ್ತಾ?, ನಿಮ್ಮ ನಡವಳಿಕೆಯಲ್ಲಿಯೂ  ಏನೋ ಬದಲಾವಣೆಗಳಾಗಿವೆ ಅಂತ ಅನ್ನಿಸ್ತಿದ್ಯಾ? ಆಗಾಗ ಕಣ್ಣು ಮಂಜುಗಟ್ಟಿದಂತೆ ಆಗುತ್ತಿದ್ದಿಯಾ, ದೇಹದಲ್ಲಿ ನರಗಳು ಹಿಡಿದುಕೊಂಡಂತೆ,  ಅಲ್ಲಲ್ಲಿ ಮುಳ್ಮುಳ್ನಂತೆ /  ಚುಚ್ಚಿದಂತೆ ಅನುಭವ ಆಗುತ್ತಿದಿಯ?, ಮಾಂಸ ಖಂಡಗಳಲ್ಲಿ ಶಕ್ತಿ ಇಲ್ಲದಂತಾಗಿ, ನಡೆಯಲು, ಮೆಟ್ಟಿಲುಗಳನ್ನ ಹತ್ತಿಳಿಯಲು ಸುಸ್ತಾಗುತಿದಿಯಾ?, ಮಲಬಧ್ಧತೆ, ಭೇದಿ , ಗ್ಯಾಸ್ಟ್ರಿಕ್ ಕಾಡುತ್ತಿದ್ದರೆ, ನಾಲಿಗೆ ಮೆತ್ತಗಿದೆ ಅಂತಾ ಅನ್ನಿಸುತ್ತಾ ಇದ್ರೆ, ನಿಮ್ಮಚರ್ಮ  ರಕ್ತ ಹೀನತೆಯಿಂದ  ಬಿಳಿಚಿಕೊಂದಿದ್ರೆ, ನಿಮ್ಮ ಉಸಿರಾಟ ಕಮ್ಮಿ ಆಗಿದೆ (short breaths)  ಅಂತನಿಸಿದಿಯಾ, ಆಗಾಗ ಎದೆ ಹಿಡಿದುಕೊಂಡಂತೆ ಆಗುತ್ತಾ ಇದ್ದೀಯ? ದೇಹದಲ್ಲಿ ಸುಸ್ತು ,ತಲೆನೋವು ಪ್ರತಿದಿನ ಬರುತ್ತಿದ್ಯಾ?? ತಲೆಯಲ್ಲಿ ಕೂದಲುಗಳು ಕಮ್ಮಿ ಆದಂತೆ ಕಾಣುತ್ತಿವೆಯಾ??

ಈ ಎಲ್ಲ (ಅತ್ವ ಇವುಗಳಲ್ಲೂ ಹಲವು) ಸಮಸ್ಯೆಗಳು ನಿಮ್ಮನ್ನ ಕಾಡುತ್ತಿದ್ದರೆ ನಿಮಗೆ ಖ೦ಡಿತವಾಗಿ ವಿಟಮಿನ್ದ B12 ಕೊರತೆ ಇದೆ ಎಂದೇ ಅರ್ಥ. !!!!ದೇಹದಲ್ಲಿ ನರಮಂಡಲ ಮತ್ತು ಕೆಂಪು ರಕ್ತ ಕಣಗಳು ಆರೋಗ್ಯಕರವಾಗಿರಲು ಈ ವಿಟಮಿನ್ B12 ತುಂಬಾ ಅತ್ಯವಶ್ಯಕ.  ಈ ವಿಟಮಿನ್ B12 ದೇಹದಲ್ಲಿ ಅನೇಕ ಕೆಲಸಗಳು ಸರಾಗವಾಗಿ ಆಗಲು ಸಹಾಯ ಮಾಡುತ್ತದೆ. ಇದರ ಕೊರತೆ ದೇಹದಲ್ಲಿ ಉಂಟಾದರೆ ದೇಹದಲ್ಲಿನ ಡಿಎನ್ಎ ಮೇಲೆ ಮತ್ತು RBC ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ. ರಕ್ತ ಹೀನತೆ ಉಂಟಾಗುತ್ತದೆ. ಹೊಟ್ಟೆ ಗ್ಯಾಸ್ಟ್ರಿಕ್ ನಿಂದ ಬಳಲುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾಗುತ್ತದೆ. ದೇಹಕ್ಕೆ ಸಣ್ಣ ಪುಟ್ಟ ಜ್ವರಗಳು ಬಂದಾಗ ಹುಶಾರಾಗಲು ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ.ಈ ವಿಟಮಿನ್ನಿನ ಕೊರತೆ ನಿಮ್ಮ ರಕ್ತ ಪರೀಕ್ಷೆಯಲ್ಲಿ ಕಂಡುಬಂದರೆ ಡಾಕ್ಟರ್ ಗಳು ಹೇಳುವ ಹಾಗೆ ಇಂಜಕ್ಷನ್, ಮತ್ತು ಮಾತ್ರೆಗಳನ್ನ ತೆಗೆದುಕೊಂಡರೆ ಈ ಕೊರತೆಯನ್ನು ತಪ್ಪಿಸಬಹುದು ಮತ್ತು ಅದರಿಂದ ದೇಹಕ್ಕೆ ಆಗುವ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು.ಡಾಕ್ಟರಗಳು ಹೇಳೋ ಪ್ರಕಾರ ಸಸ್ಯಾಹಾರಿಗಳಲ್ಲಿ ಈ ವಿಟಮಿನ್ B12 ಕೊರತೆ ಹೆಚ್ಚಾಗಿರುತ್ತೆ. ಸಸ್ಯಾಹಾರಗಳಿಂದ ಸಿಗದೆ ಇರುವ ಏಕೈಕ ವಿಟಮಿನ್ ಇದಾಗಿದೆ. ಹಾಲು, ಮೊಸರು, ಬೆಣ್ಣೆ, ಚೀಸ್ಗ ಳಲ್ಲಿ ಈ ವಿಟಮಿನ್ B12 ಸ್ವಲ್ಪ ಪ್ರಮಾಣದಲ್ಲಿ ಸಿಗುತ್ತದೆ. ಯಾವುದೇ ಹಣ್ಣು ತರಕಾರಿಗಳಲ್ಲಿ ಈ B12 ಇರುವುದಿಲ್ಲ ಹಾಗಾಗಿ ಸಸ್ಯಹಾರಿಗಳಲ್ಲಿ ಈ ವಿಟಮಿನ್ ಕೊರತೆ ಅತಿ ಹೆಚ್ಚು. ಮಾಂಸಹಾರದಲ್ಲಿ ಇದು ಅತಿ ಹೆಚ್ಚಾಗಿ ಇರುತ್ತದೆ.  ಮಾಂಸಹಾರಿಗಳಲ್ಲಿ ಈ ವಿಟಮಿನ್ B12 ಕೊರತೆ  ತುಂಬಾ ಕಮ್ಮಿ. ಇಲ್ಲ ವೆಂದೇ ಹೇಳುವರು.ದೇಹದಲ್ಲಿ ಈ ವಿಟಮಿನ್ B12 ಕೊರತೆ ಉಂಟಾಗಲು ಅನೇಕ ಕಾರಣಗಳಿವೆ. ಕೆಲವೊಂದು ಆಪರೇಷನ್ ಗಳನ್ನ ಮಾಡಿಸಿಕೊಂಡಾಗ, TB, ಕ್ಯಾನ್ಸರ್, ನಂಥ ಕಾಯಿಲೆಗಳು ಬಂದವರಲ್ಲಿ, ಮತ್ತು ದೀರ್ಘ ಕಾಲ ಟ್ರೀಟ್ಮೆಂಟ್ ಹೊಂದುವ ಕಾಯಿಲೆಗಳು ಅಟ್ಯಾಕ್ ಅದ ದೇಹಗಳಲ್ಲಿ ಈ ವಿಟಮಿನ್ ಕೊರತೆಯುಂಟಾಗುತ್ತದೆ.

ವಿಟಮಿನ್ B12 ದೇಹಕ್ಕೆ ಅತಿ ಹೆಚ್ಚು ಅವಶ್ಯಕವಾದ ವಿಟಮಿನ್ ಮತ್ತು ಅತಿ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಬೇಕು. ಈಗಿನಿಂದಲೇ ಎಚ್ಚೆತ್ತುಕೊಂಡು ಸಮತೋಲನ ಆಹಾರ ತಿಂದು ಆರೋಗ್ಯವಾಗಿರೋಣ ಎಂಬುದು ನನ್ನ ಅಂಬೋಣ.


Wednesday, 12 April 2017

Pink Moon ಅನ್ನುವ ಕವಿ ಸಮಯ


ಇತ್ತೀಚೆಗೆ ಒಂದು ಮೂರು ನಾಲ್ಕು ದಿನಗಳಿಂದ ನನ್ನ whatsup ಮತ್ತು ಫೇಸ್ಬುಕ್  ನಲ್ಲಿ ಏಪ್ರಿಲ್ ನಲ್ಲಿ "ಪಿಂಕ್ ಮೂನ್" ಮರೆಯದೆ ನೋಡಿ ಅನ್ನೋ ಮೆಸೇಜ್ ಗಳನ್ನ ನೋಡಿ ನಾನು ಇವತ್ತು ಇದುವರೆಗೂ ಕಾಯ್ತಾ ಕೂತಿದ್ದೆ. ಪಿಂಕ್ ಮೂನ್ ನೋಡೊಕಂತ.  ಆದ್ರೆ ನನಗೆ ನಿರಾಸೆ ಕಾದಿತ್ತು ಎಂದಿನಂತೆ ಚಂದ್ರ ನಂಗೆ ಬಿಳಿಯಾಗೆ ಕಂಡ. :)

ಕೆಲ ಹುಣ್ಣಿಮೆ ದಿನಗಳಲ್ಲೂ - ಎಂದಿನ ಹುಣ್ಣಿಮೆಯಂತೆ ಬೆಳ್ಳಗೇ ಕಂಡರೂ -  ಈ ಚಂದ್ರನನ್ನ ಒಮ್ಮೆಮ್ಮೆ 'ಬ್ಲೂ ಮೂನ್' ಅಂತ ಕರೆದರೆ ಮತ್ತೆ ಈಗ 'ಪಿಂಕ್ ಮೂನ್' ಅಂತಾರೆ. ಯಾಕಪ್ಪ ಈತರ? ಇಂದು ಈ ಚಂದ್ರ ನಿಜಕ್ಕೂ ಗುಲಾಬಿ ಬಣ್ಣದವನಾಗಿರ್ತಾನ ಅತ್ವ ಇದು ಬರಿಯ ಕವಿ ಕಲ್ಪನೆಯ ಅಂತ ಯೋಚನೆ ಮಾಡಿದಾಗ ನನಗೆ ಕಂಡು ಬಂದ ಕೆಲ ವಿಷಯಗಳನ್ನ ಬರೀತಾ ಇದ್ದೀನಿ.

ನಾವು ಅಂದುಕೊಂಡಿರುವಂತೆ ಇವತ್ತು ಚಂದ್ರ ಗುಲಾಬಿ ಬಣ್ಣದಲ್ಲಿ ಕಾಣೋದಿಲ್ಲ. ಪಿಂಕ್ ಮೂನ್ ನ ಇತಿಹಾಸ ಬೇರೆನೇ ಇದೆ.

ನಮ್ಮಲ್ಲಿ ಕಾರ ಹುಣ್ಣಿಮೆ (ಕಾರಬ್ಬ / ಕಾರ ಹಬ್ಬ), ಆಗಿ ಹುಣ್ಣಿಮೆ, ಬನದ ಹುಣ್ಣಿಮೆ, ನೂಲ ಹುಣ್ಣಿಮೆ, ದವನದ ಹುಣ್ಣಿಮೆ, ಸೀಗೆ ಹುಣ್ಣಿಮೆ, ಎಳ್ಳು ಅಮಾವಾಸ್ಯೆ  ಹೀಗೆ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯಗಳಿಗೆ ಹೆಸರು ಕೊಟ್ಟು ಹಬ್ಬ ಆಚರಣೆ ಮಾಡುವ ಪಧ್ಧತಿ ಮೊದಲಿಂದಲೂ ಇದೆ.    ಬಹುಶ ಜಗತ್ತಿನ ಎಲ್ಲ ಹಳೆಯ ಸಂಸ್ಕೃತಿಗಳಲ್ಲೂ ಈ ಪದ್ಧತಿ ಇದೆ ಅನ್ನಬಹುದು. ಮೂಲ ಅಮೆರಿಕನ್ನರೂ (Native Americans) ಸಹಾ ಈ ರೀತಿ ಹುಣ್ಣಿಮೆಯ ಚಂದ್ರನಿಗೆ ಹೆಸರು ಕೊಡುವ ಪದ್ಧತಿ ಹೊಂದಿದ್ದರು ಎಂದು ತಿಳುದು ಬರುತ್ತೆ, ಈ ಮೂಲ ಅಮೆರಿಕನ್ನರ ಆಚರಣೆಗಳ ಮೂಲದಿಂದ ಹುಟ್ಟಿದ್ದೇ ಈ ಪಿಂಕ್ ಮೂನ್ ಅನ್ನುವ ಹೆಸರು.

ನಮ್ಮಲ್ಲಿ "ಕಾರ" ಹುಣ್ಣಿಮೆ (ಕಾರಬ್ಬ), "ಎಳ್ಳು" ಅಮಾವಾಸ್ಯೆ ಇತ್ಯಾದಿ ಹೆಸರುಗಳನ್ನಿಟ್ಟು ಹೇಗೆ ಹುಣ್ಣಿಮೆ ಅಮಾವಾಸ್ಯೆಗಳನ್ನ ಗುರ್ತಿಸ್ತಿದ್ದೆವೋ ಮತ್ತಿವು ನಮ್ಮ ಸಂಸ್ಕೃತಿ ಹಬ್ಬ ಆಚರಣೆಗಳ ಭಾಗವಾಗುತ್ತಿದ್ದವೋ ಅದೇ ರೀತಿ ಮೂಲ ಅಮೆರಿಕನ್ನರ ಸಂಸ್ಕೃತಿಯ ಪಳೆಯುಳಿಕೆಯೇ ಈ "ಪಿಂಕ್ ಮೂನ್" ಅನ್ನುವ ಹೆಸರು!!

ಅಮೇರಿಕದಲ್ಲಿ  ಇಲ್ಲಿ ನಮಗಿರುವಂತೆ ಏಪ್ರಿಲ್ ನಲ್ಲಿ ವಸಂತ ಋತು (ಅವರು ಸ್ಪ್ರಿಂಗ್ ಸೀಸನ್ ಅಂತಾರೆ). ಈ ಋತುವಿನಲ್ಲಿ ಆ ದೇಶದಲ್ಲಿ ಒಂದು ವಿಶೇಷ ಜಾತಿಯ ಮರಗಳು ಗುಲಾಬಿ ಬಣ್ಣದ ಹೂವುಗಳಿಂದ ತುಂಬಿರುತ್ತವೆ. ನಮ್ಮಲ್ಲಿ ಹೇಗೆ ವಸಂತ ಋತು ಎಂದರೆ ಪ್ರಕೃತಿ ಹಸಿರು ತುಂಬಿದಂತೆ   ಕಾಣುವುದೋ ಹಾಗೆ ಮತ್ತು  ನಾವು ವಸಂತ ಋತುವನ್ನು ಹಸಿರು ಬಣ್ಣದ ಸೀರೆಯುಟ್ಟ ಪ್ರಕೃತಿ  ಅಂತ ವರ್ಣಿಸುತ್ತೆವೆಯೋ ಹಾಗೆಯೇ ಈ ಪಿಂಕ್ ಮೂನ್ ಕಲ್ಪನೆ. ಅಸ್ಟೇ.,,. ಅಲ್ಲಿನ ಸ್ಪ್ರಿಂಗ್ ನ   ಕಾಲದಲ್ಲಿ   ಅಲ್ಲಿನ ಕೆಲವು ಜಾತಿಯ ಮರಗಳು ಗುಲಾಬಿ ಬಣ್ಣದ ಹೂವುಗಳಿಂದ  ಕಂಗೊಳಿಸುತ್ತಿರುತ್ತವೆ. ಆಗ ಬರುವ ಮೊದಲ ಬೆಳದಿಂಗಳಿನ ಬೆಳಕು  ಪಿಂಕ್ ಹೂವಿನ ಮೇಲೆ ಬೀಳುವುದರಿಂದ ಆ ಹುಣ್ಣಿಮೆ ಚಂದ್ರನನ್ನು ಪಿಂಕ್ ಮೂನ್ ಎಂದು ಕರೆಯುತ್ತಿದ್ದರು.  ಅಲ್ಲಿನ ಜನರ ವಾಡಿಕೆಯಂತೆ ಮತ್ತು ಅಲ್ಲಿನ ಕವಿಗಳ ಕಲ್ಪನೆಯಂತೆ   ಅವರ ವಸಂತ ಋತುವಿನ ಮೊದಲ ಬೆಳದಿಂಗಳಿನ ಚಂದ್ರನನ್ನು ಪಿಂಕ್ ಮೂನ್ ಅಂತ ವರ್ಣಿಸುತ್ತಾರೆ.  ಹಾಗೆ ಅಲ್ಲಿನ ಕವಿಗಳು ತಮ್ಮ ಪದ್ಯಗಳಲ್ಲಿ ಅವರ ಸ್ಪ್ರಿಂಗ್ ಸೀಸನ್ನ ಮೊದಲ ಹುಣ್ಣಿಮೆ ಚಂದ್ರನನ್ನ  ಪಿಂಕ್ ಮೂನ್ ಎಂದು ತಮ್ಮ ಕವಿತೆಗಳಲ್ಲಿ ವರ್ಣಿಸುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ  ಏಪ್ರಿಲ್ ನ ತಿಂಗಳಿನ ಮೂನ್ ನನ್ನು  ಅಮೇರಿಕಾನಲ್ಲಿ ಪಿಂಕ್ ಮೂನ್ ಎಂದು ಕರೆಯುವ ರೂಢಿ ಶುರುವಾಯಿತು ಎಂದು ಹೇಳಬಹುದು.

ಅಮೇರಿಕಾದ ವಸಂತ ಋತುವಿನಲ್ಲಿ ಪಿಂಕ್ ಬಣ್ಣದಿಂದ ಕಂಗೊಳಿಸುವ ವಿಶೇಷ ರೀತಿಯ ಮರಗಳು :-

ಗೂಗಲ್ಲಿಂದ ಪಿಂಕ್ ಬಣ್ಣದ ಹೂಗಳು ಪಿಂಕ್ ಬಣ್ಣ ಕೊಡುವ ಹೂಗಳು - ಗೂಗಲ್ಲಿಂದ
ಈ ಕೆಳಗಿನ ಪಿಂಕ್ ಮೂನ್ ಮೇಲಿನ ಕವಿತೆ ಸಂತ ಕಾಲವನ್ನು ಮತ್ತು ಆಗ  ಅರಳುವ ಪಿಂಕ್ ಹೂವಿನ ವರ್ಣನೆ ಇದೆ


ಮಂಗಳವಾರ ರಾತ್ರಿ ಪಿಂಕ್ ಮೂನ್ ಗಾಗಿ ಕಾದು ಕುಳಿತು ನಾನು ನನ್ನ ಮೊಬೈಲಲ್ಲಿ ಕ್ಲಿಕ್ಕಿಸಿದ ಚಂದ್ರನ ಕೆಲವು ಪಟಗಳು : 

Wednesday, 5 April 2017

ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ ... suicide is not a solution...

ಹೀಗೆ ಫೇಸ್ ಬುಕ್ ಸ್ಕ್ರಾಲ್ ಮಾಡ್ತಾ ಇರೋವಾಗ ಒಂದು ನ್ಯೂಸ್ ಓದಿದೆ. ಬೆಂಗಳೂರು ಮೂಲದ 24 ವರ್ಷದ ಅರ್ಜುನ್ ಭಾರದ್ವಾಜ್ ಎಂಬ ಇಂಜಿನಿಯರ್ ಸ್ಟೂಡೆಂಟ್ ಮುಂಬೈಯ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ರೂಂನಿಂದ  ಮೇಲಿನಿಂದ ಕೆಳಕ್ಕೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರೋದು. ಆತನ ಆತ್ಮಹತ್ಯೆಗೆ ಕಾರಣ ಏನು ಎಂದು ಕೂಡ ಫೇಸ್ಬುಕ್ ನಲ್ಲಿ ಲೈವ್ ಚಾಟ್ ಮಾಡಿ,  ಎಲ್ಲರಿಗು ಬೈ ಹೇಳಿ,  ನಂತರ ಕೆಳಗೆ ಹಾರಿ ಆತ್ಮ ಹತ್ಯೆ  ಮಾಡಿಕೊಂಡಿರುವುದು. ಅವನ ಆತ್ಮಹತ್ಯೆಗೆ ಕಾರಣ, ಅವನಿಗಿದ್ದ ಡಿಪ್ರೆಶನ್. ಈ ನ್ಯೂಸ್ ಓದಿದ ಮೇಲೆ ಈ  ಆತ್ಮಹತ್ಯೆ  ಯಾಕೆ ಮಾಡ್ಕೊತಾರೆ?  ಡಿಪ್ರೆಶನ್ ಯಾಕೆ ಬರುತ್ತೆ    ಅನ್ನೋ ಪ್ರಶ್ನೆಗಳು  ಇವತ್ತು ನನ್ನ ತಲೆಲ್ಲಿ ಗಿರ್ಕಿ ಹೊಡಿತಾ ಇವೆ. ನನ್ನ ತಲೇಲಿ  ಏನೆಲ್ಲಾ ವಿಷಯಗಳು ಬಂದವೋ ಅವನ್ನ ಇಲ್ಲಿ ಬರಿತಾಯಿದಿನಿ.. ಇತ್ತೀಚಿನ ದಿನಗಳಲ್ಲಿ ತುಂಬಾನೇ ಯಂಗ್ಸ್ಟರ್ಸ್ ಅತ್ಮಹತ್ಯೆ ಮಾಡಿಕೊಳ್ಳೋದು ಕಾಮನ್ ಆಗಿಹೋಗಿದೆ. sslc ಮತ್ತು puc ರಿಸಲ್ಟ ಅನೌನ್ಸ್ಆದ  ದಿನಗಳಲ್ಲಿ ಆತ್ಮಹತ್ಯೆಯ ಪ್ರಕರಣಗಳು ಇನ್ನೂ ಹೆಚ್ಚು.  ಬರೀ ಓದಿನ ವಿಷಯದಲ್ಲಿ ಮಾತ್ರವಲ್ಲ ನೌಕರಿ , ಕೌಟುಂಬಿಕ , ಸಾಮಾಜಿಕ, ಆರೋಗ್ಯಕ್ಕೆ ಸಂಬಂಧಿಸಿದಂತೆ ಎಸ್ಟೋ ವಿಷಯಗಳಿಗೆ ನಮ್ಮಎಲ್ಲರ  ಮನಸ್ಸುಗಳು  ಡಿಪ್ರೆಶನ್ ಗೆ ಹೋಗುತ್ತವೆ. 

ಡಿಪ್ರೆಶನ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುವರ ಪಟ್ಟಿಯಲ್ಲಿ ಪ್ರಪಂಚದಲ್ಲಿyee  ನಮ್ಮ ಭಾರತದ ಹೆಸರು  ಮುಂಚೂಣಿಯಲ್ಲಿ ಇರುವುದು  ವಿಷಾದನೀಯ.  ಈ ಡಿಪ್ರೆಶನ್ ಗೆ ಕಾರಣ ಏನು ಅಂತ ಯೋಚಿಸಿದಾಗ ಹಲವಾರು ವಿಷಯಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಪ್ರತಿ ವಿಷಯದಲ್ಲೂ ಪ್ರಬಲವಾಗಿ ಪೈಪೋಟಿ ಮಾಡಲೇ ಬೇಕು. ಮಕ್ಕಳಿಗೆ ಶಿಕ್ಷಣದಲ್ಲಿ ತಾವು ಎಲ್ಲರಿಗಿಂತ ಹೆಚ್ಚು ಮಾರ್ಕ್ಸ್ ತೆಗಿಬೇಕು ಅನ್ನೋ ಒತ್ತಡ. ತಂದೆ-ತಾಯಿಯರಿಗೆ ತಮ್ಮ ಮಗನ ಶಾಲಾ ಕಾಲೇಜುಗಳ ಬಿಲ್ ಕಟ್ಟುವ ಒತ್ತಡ. ನೌಕರಿ ಸಿಕ್ಕ ಮೇಲೆ ಒಳ್ಳೆ ಸಂಬಳ ಬರುತ್ತಿಲ್ಲ ಎಂಬ ಒತ್ತಡ, ಆಫೀಸ್ ನಲ್ಲಿ ತನಗೆ ಒಳ್ಳೆಯ ಸ್ಥಾನ ಸಿಕ್ಕುತ್ತಿಲ್ಲ ಎಂಬ ಒತ್ತಡ, ಇವುಗಳ ಜೊತೆ  ಕೌಟುಂಬಿಕ ಸಮಸ್ಯೆಗಳ ಸಾಗರದಲ್ಲಿ ಈಜುತ್ತಿರುವ ಎಲ್ಲರೂ  ಒಂದಲ್ಲ ಒಂದು ರೀತಿಯ ಅವರವರದೇ ಆದ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿರುತ್ತಾರೆ. ಈ ಸಮಸ್ಯೆಗಳನ್ನ ಹೇಗೆ ನಿಭಾಯಿಸುತ್ತೀವಿ ಅದೇ ಜೀವನದ ಲೆಖ್ಖಾಚಾರ.

ಕೆಲವರು ಸಮಸ್ಯೆಗಳನ್ನ ಸ್ಫೂರ್ತಿ ಯಾಗಿ ತೆಗೆದುಕೊಂಡು ಬಗೆಹರಿಸಿಕೊಳ್ಳುತ್ತಾರೆ. ಸಮಸ್ಯೆ ಮನುಷ್ಯನಿಗಲ್ದೆ ಮರಕ್ಕ ಬರುತ್ತೆ ಅಂತ ಯಾವುದೇ ಸಮಸ್ಯೇನು ಕೂಲ್ ಆಗಿ ತೊಗೊಳೋ ಅಂಥವರು ಕೆಲವರಾದರೆ. ಇನ್ನು ಕೆಲವರು ಇಡೀ ಮೌಂಟ್ ಎವರೆಸ್ಟ್ ತಮ್ಮ ತಲೆ ಮೇಲೆ ಹೊತ್ತು ನಿಂತಿದಿವೇನೋ ಅನ್ನೋ ಮನಸ್ಥಿತಿಯಲ್ಲಿರುತ್ತಾರೆ. ಹೀಗೆ ಸಮಸ್ಯೆಯ ಸುಳಿಯಲ್ಲಿ ಮುಳುಗಿ ಡಿಪ್ರೆಶನ್ ಹಂತ ತಲುಪುತ್ತಾರೆ.  ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುತ್ತಾರೆ ಮತ್ತು  ಈ ಆತ್ಮಹತ್ಯೆಗೆ ಅನ್ನೋ ಅಪರಾಧವನ್ನ ತಮಗೆ ತಾವೇ ಮಾಡಿಕೊಳ್ಳುತ್ತಾರೆ. 

ಡಿಪ್ರೆಶನ್ ಆದಾಗ ನಾವು ಮಾಡಬೇಕಾದ್ದು ಇಸ್ಟೇ.....
 ನಮ್ಮ ಮನಸ್ಸು ಡಿಪ್ರೆಶನ್ ನಲ್ಲಿ ಮುಳುಗಿದೆ ಎಂದೆನಿಸಿದ  ಸಮಯದಲ್ಲಿ  ಮನೆಯ ಹಿರಿಯರೊಡನೆ ಕೂತು ತಮ್ಮ ಡಿಪ್ರೆಶನ್  ಬಗ್ಗೆ ಚರ್ಚಿಸಬೇಕು. ಇಲ್ಲವೇ  ಮಾನಸಿಕ ತಜ್ಞರ , ಡಾಕ್ಟರ ಹತ್ರ ಹೋಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸರಿಯಾದ ಮೆಡಿಸಿನ್ ತೊಗೊಂಡ್ರೆ ಎಲ್ಲ ಸರಿಹೋಗುತ್ತೆ. ನಮ್ಮ ಜನರಲ್ಲಿ ಇನ್ನೊಂದು ಅಳುಕು ಇದೆ. ಮಾನಸಿಕ ತಜ್ಞರನ್ನ ಭೇಟಿ ಮಾಡಿ ಅಲ್ಲಿ ಟ್ರೀಟ್ಮೆಂಟ್ ತೊಗೊಂಡ್ರೆ ನನ್ನ ಸುತ್ತಮುತ್ತಲಿನ ಸಮಾಜ ಎಲ್ಲಿ ತನ್ನನ್ನ ಹುಚ್ಚ ಅಂತ ಅನ್ನುತ್ತೋ ? ಅಂತ. ವಿದೇಶಗಳಲ್ಲಿ ಮಾನಸಿಕ ಡಾಕ್ಟರ ಗಳಿಗೆ ತುಂಬಾ ಬೇಡಿಕೆ. ಅಲ್ಲಿ ಸಣ್ಣ ಪುಟ್ಟ  ತಲೆನೋವಿಗೆಲ್ಲ  ಮತ್ತೆ ಚಿಕ್ಕ-ಪುಟ್ಟ ಬೇಜಾರಾದರು ಮಾನಸಿಕ ತಜ್ಞರನ್ನ ಭೇಟಿ ಮಾಡೋದು ಸಹಜವಾಗಿಹೋಗಿದೆ. ಇದು ನಮ್ಮಲ್ಲೂ ಬರಬೇಕು. ಆಗ ಈ ಆತ್ಮಹತ್ಯೆಯಂಥ ಸಮಸ್ಯೆ ಸಮಾಜದಲ್ಲಿ ಕಡಿಮೆಯಾಗುತ್ತದೆ. 

ಸಮಸ್ಯೆ ಯಾರಿಗಿರಲ್ಲ ಹೇಳಿ ಪ್ರತಿಯೊಬ್ಬರಿಗೂ ಅವರವರದೇ ಆದ ಸಮಸ್ಯೆಗಳು ಇರುತ್ವೆ. ಹುಟ್ಟು-ಸಾವು, ಹಗಲು-ರಾತ್ರಿ, ಕಪ್ಪು-ಬಿಳುಪು, ಸುಖ-ದುಃಖ, ನೋವು-ನಲಿವು ಎಲ್ಲವನ್ನ ಭೂಮಿ ಮೇಲೆ ಹುಟ್ಟಿದ ಮೇಲೆ   ಎಲ್ಲ  ಅನುಭವಿಸಲೇ ಬೇಕು. ಆನೆಗೆ ಆನೆ ಭಾರ ಆದ್ರೆ , ಇರುವೆಗೆ ಇರುವೆ ಭಾರ.  ನಮ್ಮ ಕಷ್ಟನೆ ದೊಡ್ಡದು ಅಂತ ತಲೆ ಮೇಲೆ ಕೈ ಹೊತ್ತು ಮೂಲೆಗೆ ಕೂರಬಾರದು. ಹಾಗೇ ಯಾವ ಅನಾಹುತಾನೂ ಮಾಡ್ಕೊಬಾರದು. ನಿರಂತರ ಹೋರಾಟವೇ ಜೀವನ.

ಈಗ ನನಗೆ ಪುರಂದರ ವಿಠಲರ ಒಂದು ಕೀರ್ತನೆ ನೆನಪಾಗುತ್ತಿದೆ ಅದೇನೆಂದರೆ ,,

ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸಂಸಾರದಲ್ಲಿ ಅಸೆ ಲೇಶ ಇಡದ್ಹಾಂಗೆ

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ

ಗೇರು ಹಣ್ಣಿನಲ್ಲಿ ಬೀಜ  ಸೇರಿದಂತೆ ಸಂಸಾರದಿ
ಮೀರಿ ಆಸೆ ಮಾಡದಂತೆ  ಧೀರ ಕೃಷ್ಣ ನ ಭಕುತರೆಲ್ಲ

ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆ ಪಟ್ಟ ಪರಿಯಂತೆ
ಮೋಸ ಹೋಗದ್ಹಾಂಗೆ ಜಗದೀಶ ಪುರಂದರ ವಿಠಲನ ನೆನೆದು.


Tuesday, 4 April 2017

ಏಯ್ ! ತರ್ಲೆ ಜಿರಳೆ, ನಿಂದೆಸ್ಟ್ ರಗಳೆ ?

ಹಬ್ಬಗಳು ಬಂತಂದ್ರೆ ಸಾಕು ನಮ್ಮ ಹೆಣ್ಣು ಮಕ್ಕಳಿಗೆ ಮನೆ ಸ್ವಚ್ಛ ಮಾಡೋ ಕೆಲಸ. ಮನೆಯ ಮೂಲೇ- ಮೂಲೇನೂ ಗುಡಿಸಿ ಒರೆಸಿ ಹಬ್ಬಕ್ಕೆ ಮನೆ ಸಿಂಗಾರ ಮಾಡಿ, ಹಬ್ಬ ಮುಗಿಯೋದ್ರಲ್ಲಿ ಹೆಣ್ಣುಮಕ್ಕಳ ಬೆನ್ನು ಮೂಳೆ ಮುರಿದು ಬಿದ್ದಿರುತ್ತೆ. ಎಲ್ಲ ಕೆಲಸ ಓಕೆ... ಆದ್ರೆ!!  ಮನೆ ಕ್ಲೀನ್ ಮಾಡೋವಾಗ ಈ ಜಿರಳೆಗಳ ಹಾವಳಿ ಇದ್ಯಲ್ಲ ಅದನ್ನ ನೆನೆಸಿಕೊಂಡರೆ ಮೈಎಲ್ಲಾ ಉರಿಯುತ್ತೆ. ಮನೆಯ ಯಾವ ಜಾಗದಲ್ಲಿ ಇವು ಇರಲ್ಲ ಹೇಳಿ ? ಇವುಗಳನ್ನ ತಿನ್ನೋಕಂತ ಮನೇಲಿ ನಾವು ಇದೀವಿ ಅಂತ ಆಗಾಗ ಗೋಡೆ ಮೇಲೆ ಹರಿದಾಡೋ ಹಲ್ಲಿಗಳದ್ದು ಇನ್ನೊಂತರ ಕಾಟ. ಆ ಜಿರಳೆಗಳು,  ಜಿರಳೆಗಳ ಕಪ್ಪು ಪಿಸ್ಕಿ, ಹಲ್ಲಿಗಳು ಜಿರಳೆಗಳನ್ನ ತಿಂದು  ಅರ್ಧ ದೇಹ ಅಲ್ಲೇ ಬಿದ್ದಿದ್ದು , ಅದನ್ನ ತಿನ್ನೋಕೆ ಬರೋ ಇರುವೆಗಳು,,,ಇವುಗಳಿಂದಾಗೋ ಹಿಂಸೇನ ಯಾರಿಗಂತಾ ಹೇಳೋದು ?ನಾನು  ಈ ಜಿರಳೆಯಿಂದ ಉಪಟಳ ತಪ್ಪಿಸಿಕೊಳ್ಳೋಕೆ ಸಿಕ್ಕೋರತ್ರ ಎಲ್ಲ ಟಿಪ್ಸ್ ಕೇಳಿ, ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿ, ನನಗೆ ಸಿಕ್ಕ ಕೆಲವೊಂದು ಸಮಾಧಾನಕರ, ಮಾಡಲು ಸುಲಭದ ಟಿಪ್ಸ್ ಗಳನ್ನ ಇಲ್ಲಿ ಬರಿತಾಯಿದೀನಿ....ನನ್ನಂತೆ ಜಿರಲೆಗಳಿಂದ ಹಿಂಸೆಗೆ ಒಳಗಾಗುತ್ತಿರುವ ಮಹಿಳೆಯರಿಗೆ ನನ್ನದೊಂದು ಪುಟ್ಟ ಅಳಿಲು ಸೇವೆ ಥರ ಇವು ಅಳಿಲು ಸಲಹೆಗಳು ಅಂದುಕೊಳ್ಳಿ ,,,,,ಟ್ರೈ ಮಾಡಿ ನೋಡಿ,,,,

ಸಲಹೆಗಳು 


 • ಮೆಣಸು, ಈರುಳ್ಳಿ, ಬೆಳ್ಳುಳ್ಳಿ ರಸಗಳನ್ನು ಮಾಡಿ  ಜಿರಳೆ ಓಡಾಡುವಲ್ಲಿ ಚಿಮುಕಿಸಿದರೆ ಜಿರಳೆಗಳು ಸಾಯುತ್ತವೆ.
 • ಸ್ವಲ್ಪ ರೆಡ್ ವೈನ್ ನನ್ನು ಸ್ಲಾಬ್ ಕೆಳಗೆ ಚಿಮುಕಿಸಿದರೆ ಜಿರಳೆ ಬರುವುದಿಲ್ಲ.
 • ಅಡುಗೆ ಮನೆ ಕಬೋಡ ಒಳಗೆ ರೆಡ್ ವೈನ್ ಇಟ್ಟರೆ ಸಾಕು ಜಿರಳೆ ಬರುವುದಿಲ್ಲ.
 • ಜಿರಳೆ ಬರುವ ಕಡೆ ಸ್ಲಾಬ್  ಅಡಿ ಲವಂಗ ಪುಡಿಯನ್ನು ಇಡಿ. ಎರೆಡು - ಮೂರೂ ವಾರಕ್ಕೊಮ್ಮೆ ಪುಡಿ ಬದಲಾಯಿಸುತ್ತಿರಿ.
 • ಸುವಾಸನೆ ಭರಿತ ಕರಿಬೇವು ಸೊಪ್ಪನ್ನು  ಜಿರಳೆ ಓಡಾಡುವಲ್ಲಿ ಇಟ್ಟರೆ ಜಿರಳೆಗಳು ಆ ವಾಸನೆಗೆ ದೂರ ಓಡುತ್ತವೆ.
 • ಕಾಫೀ ಬೀಜ ಅಥವಾ ಕಾಫೀ ಪುಡಿ  ಮತ್ತು ತಂಬಾಕು ಪುಡಿಯನ್ನು ಮಿಶ್ರಣ ಮಾಡಿ ಅಲ್ಲಲ್ಲಿ ಚಿಕ್ಕ ಪ್ಲ್ಯಾಸ್ಟಿಕ್ ಕಪ್ ಗಳಲ್ಲಿ ತುಂಬಿಡಿ ಅದನ್ನು ತಿಂದು  ಜಿರಳೆ ಸಾಯುತ್ತವೆ.
 • ಮೊಟ್ಟೆಯ ಚಿಪ್ಪನ್ನು ಜಿರಳೆ ಬರುವ ಕಡೆ ಇಟ್ಟರೆ ಸಾಕು ಜಿರಳೆ ಮನೆಯೊಳಗೇ ಬರುವುದಿಲ್ಲ.
 • ಸಕ್ಕರೆ ಪುಡಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ , ಅದಕ್ಕೆ ಬೋರಿಕ್  ಆಸಿಡ್ ಹಾಕಿ ಮಿಶ್ರಣ ಮಾಡಿ ಇಟ್ಟರೆ ಅದರ ವಾಸನೆಗೆ ಜಿರಳೆ ದೂರ ಓಡುತ್ತವೆ.
 • ಬೋರಾಕ್ಸ್  ಪುಡಿಯನ್ನು 15 ದಿನಗಳಿಗೊಮ್ಮೆ ಚಿಮುಕಿಸುತ್ತಿದ್ದರೆ ಜಿರಳೆಗಳು ಬರುವುದಿಲ್ಲ. 
 • ಬೋರಿಕ್ ಆಮ್ಲ ಮತ್ತು ಅದರ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ ಅಲ್ಲಲ್ಲಿ ಇಡಿ. ಅದನ್ನು ತಿಂದ ಜಿರಳೆಗಳು ಸಾಯುತ್ತವೆ.
 • ಸ್ನಾನದ ಸೋಪ್ ಮತ್ತು ನೀರನ್ನು ಮಿಶ್ರಣ ಮಾಡಿ ನೇರವಾಗಿ ಜಿರಳೆ ಮೇಲೆ ಚಿಮುಕಿಸಿದರೆ ಆ ನೀರು  ಜಿರಳೆಗಳನ್ನು ಕೊಲ್ಳುತ್ತದೆ.
 • ಪ್ರತಿ ಎರೆಡು ವಾರಕ್ಕೊಮ್ಮೆ 2 ಕಪ್  ಅಮೋನಿಯಗೆ ನೀರನ್ನು ಹಾಕಿ ನೆಲವನ್ನು ಒರೆಸುತ್ತಿದ್ದರೆ ಆ ವಾಸನೆಗೆ ಜಿರಳೆ ಹೊರ ಹೋಗುತ್ತವೆ.
 • ಸಪ್ತಾಲಿನ್ ಬಾಲ್ ನ್ನು ಬಟ್ಟೆಗಳಿರುವಲ್ಲಿ,  ಬಾತ್ರೂಮ್ ನಲ್ಲಿ, ಅಡುಗೆ ಮನೆಯಲ್ಲಿ ಅಲ್ಲಲ್ಲಿ ಇಡಿ ಅದರ ವಾಸನೆಗೆ ಜಿರಳೆ ದೂರ ಹೋಗುತ್ತವೆ.
 • 3ಭಾಗ ಬೊರಾಕ್ಸ್ ಮತ್ತು ಒಂದು ಭಾಗ ಸಕ್ಕರೆ ಮಿಶ್ರಣ ಮಾಡಿ ಜಿರಳೆ ಹೆಚ್ಚಾಗಿರುವ ಜಾಗಕ್ಕೆ ಸ್ಪ್ರೇ ಮಾಡಿ ತಕ್ಷಣ ಜಿರಳೆಗಳು ಸಾಯುತ್ತವೆ.
 • ಬೊರಕ್ಷ್ ಬಳಸಲು ಇಷ್ಟ ಇಲ್ಲ  ಅಂದ್ರೆ ಅಡುಗೆ ಸೋಡಾ ಮತ್ತು ಸಕ್ಕರೆ ಸಮ ಪ್ರಮಾಣದಲ್ಲಿ ಬೆರೆಸಿ ಚಿಮುಕಿಸಿ.
 • ಫ್ಯಾಬ್ರಿಕ್ ಸಾಫ್ಟ್ನಾರ್ 3 ಭಾಗ , ಎರೆದು ಭಾಗ ನೀರು ಬಳಸಿ  ಜಿರಳೆ ಮೇಲೆ  ಮೇಲೆ ಸ್ಪ್ರೇ ಮಾಡಿ.
Wednesday, 29 March 2017

ಯುಗಾದಿ ಹಬ್ಬ ಮತ್ತು 60 ಸಂವತ್ಸರಗಳು

ಯುಗಾದಿ ಹಬ್ಬ ಅಂದ್ರೆ ಹೊಸ ವರ್ಷದ ಚೈತ್ರ ಮಾಸದ ಆರಂಭದ ಮೊದಲ ದಿನ. ಎಲ್ಲರಿಗೂ ಗೊತ್ತಿರುವ ಹಾಗೆ 2 ರೀತಿಯ ಉಗಾದಿ ಹಬ್ಬಗಳಿವೆ. ಒಂದು ಚಾಂದ್ರಮಾನ ಯುಗಾದಿ ಅದು ಈಗ ನಾವು ಆಚರಿಸುತ್ತಿರುವುದು. ಇಲ್ಲಿ ಚಂದ್ರನ ಚಲನೆಯನ್ನು ಲೆಖ್ಖ ಹಾಕಿ ಮಾಸ ಮತ್ತು ಪಕ್ಷಗಳನ್ನು ಗುರುತಿಸಲಾಗುತ್ತದೆ. ಎರಡನೇದು ಸೌರಮಾನ ಯುಗಾದಿ. ಸೂರ್ಯನ ಚಲನೆಯನ್ನು ಅನುಸರಿಸಿ  ಮೇಷ ರಾಶಿಯ ಮೊದಲ ಸೂರ್ಯನ ದಿನವನ್ನು ಹೊಸ ವರ್ಷದ ದಿನ ಎಂದು ಹೇಳಲಾಗುತ್ತದೆ.

ಈ ಯುಗಾದಿ ದಿನದಂದು ಬೆಳಗೆದ್ದು ಎಣ್ಣೆ ಸ್ನಾನ ಮಾಡಿ, ದೇವರಿಗ ಪೂಜೆ ಮಾಡಿ, ಬೇವು-ಬೆಲ್ಲ ತಿಂದು, ಮನೆಗೆ ಬಂದವರಿಗೆ ಬೇವು-ಬೆಲ್ಲ ಕೊಟ್ಟು , ಹಬ್ಬದೂಟ ಉಣ್ಣಿಸುವುದು ಬೆಳಗಿನ ಸಂಭ್ರಮ. ಸಂಜೆಯ ಮೇಲೆ ಚಂದ್ರನನ್ನು ನೋಡಿ ಮನೆಯ ಹಿರಿಯರಿಗೆ ಕಿರಿಯರು ಕಾಲಿಗೆ ಬಿದ್ದು ನಮಸ್ಕರಿಸುವುದು. ಸಂಬoಧಿಕರ ಮನೆಗಳಿಗೆ ಹೋಗಿ ಬೇವುಬೆಲ್ಲ ತಿನ್ನುವುದು. ಅವರುಗಳ ಆಶೀರ್ವಾದ ಪಡೆಯುವ ವಾಡಿಕೆ ನಮ್ಮೂರ ಕಡೆ  ಇದೆ.  

ಈ ವರ್ಷ ಅಂದರೆ 2017 ರ ಯುಗಾದಿಯು ಹಿಂದೂ ಪಂಚಾಂಗದ ಪ್ರಕಾರ 30 ನೇ ದುರ್ಮುಖಿ ಸಂವತ್ಸರದಿಂದ ಹೇವಿಳಂಬಿ  ( ಹೇಮಲಂಬಿ) ಎಂಬ 31 ನೇ  ಸಂವತ್ಸರಕ್ಕೆ ಹೆಜ್ಜೆ ಇಡುವ ದಿನ. ಈ ಸಂವತ್ಸರ ಅಂದ್ರೆ ಏನು? ಪ್ರತಿ ಯುಗಾದಿ ಹಬ್ಬದಂದು ಈ ಸಂವತ್ಸರ ಅನ್ನೋ ಪದ ನಂಗೆ ತುಂಬಾ ಸೆಳಿತಾ ಇತ್ತು. ಏನಿವು ಸಂವತ್ಸರ? ಯಾರು ಇವನ್ನ ಕಂಡು ಹಿಡಿದದ್ದು?  ಯಾವ ಆಧಾರದ ಮೇಲೆ ಈ  60 ಸಂವತ್ಸರಗಳಿಗೆ ಹೆಸರುಗಳನ್ನ ಇಟ್ಟಿದ್ದಾರೆ?  ಆ ಸಂವತ್ಸರಗಳ ಸಂಖ್ಯೆ 100 ಕೂಡ ಯಾಕೆ ಆಗಿಲ್ಲ. 100 ವರ್ಷಗಳಿಗೆ ಶತಮಾನ ಅನ್ನೋ ಹೆಸರಿದೆ. ಅದಕ್ಕನುಗುಣವಾಗಿ 100 ಹೆಸರುಗಳನ್ನ ಇಡಬಹುದಿತ್ತು ಅಲ್ವ? ಅನ್ನೋ ಪ್ರಶ್ನೆ ಗಳು ನನ್ನ ತಲೆಯಲ್ಲಿ ತುಂಬಾ ವರ್ಷಗಳಿಂದ ಕಾಡುತ್ತಾ ಇವೆ.. ಅವಕ್ಕೆ ಉತ್ತರ ಹುಡುಕಲೆಂದು ಅಂತರ್ಜಾಲ ಮೊರೆ ಹೋದಾಗ ನನಗೆ ಯುಗಾದಿ ಹಬ್ಬದ ಬಗ್ಗೆ ಮತ್ತು ಸಂವತ್ಸರದ ಬಗ್ಗೆ  ಸಿಕ್ಕ ಕೆಲವು ಮಾಹಿತಿಗಳನ್ನ ಇಲ್ಲಿ ಬರೀತಾಯಿದಿನಿ.


 • ಈ ದಿನ ಹೊಸ ವರ್ಷದ ಆಚರಣೆಯನ್ನ ಹಿಂದೂಗಳು ಮಾತ್ರವಲ್ಲ ಇರಾನಿಗರು  ಕೂಡ ನೌರೋಜ್ ಎಂಬ ಹೆಸರಿನಲ್ಲಿ ಹೊಸ ವರ್ಷ ಆಚರಿಸುತ್ತಾರೆ. 
 • 60 ಸಂವತ್ಸರಗಳು ಶಾಪಗ್ರಸ್ತ ನಾರದನ ಮಕ್ಕಳು  ಎಂದು ಹೇಳಲಾಗುತ್ತದೆ. 
 • ಚಂದ್ರನ ಆಕಾರಗಳನ್ನು ಅನುಸರಿಸಿ ತಿಂಗಳುಗಳು ಉಂಟಾಗುತ್ತವೆ. ಸೂರ್ಯನ ಚಲನೆಯನ್ನು ಅನುಸರಿಸಿ ಸಂವತ್ಸರಗಳಾಗುತ್ತವೆ. ಈ ರೀತಿ ಭಾಸ್ಕರಾಚಾರ್ಯರು ತಮ್ಮ ಸಿಧ್ಧಾಂತ ಶಿರೋಮಣಿಯಲ್ಲಿ ಚಂದ್ರ ಮತ್ತು ಸೂರ್ಯನ ಚಲನೆಯ ಸಂಬಂಧದ ಬಗ್ಗೆ ವಿವರಿಸಿರುವುದು ಸಮಂಜಸವಾಗಿದೆ.
 • ಈ ದಿನ ಶಾಲಿವಾಹನನು ವಿಕ್ರಮಾದಿತ್ಯನ ವಿರುದ್ಧ  ಜಯಿಸಿ ಶಾಲಿವಾಹನ ಶಕ ಪ್ರಾರಂಭವಾದ ದಿನ ಎಂದು ಹೇಳಲಾಗುತ್ತದೆ.
 • ವಾಲ್ಮೀಕಿ ರಾಮಾಯಣದ ಪ್ರಕಾರ ಶ್ರೀರಾಮ ವನವಾಸ ಮುಗಿಸಿ ಅಯೋದ್ಯೆಗೆ ಹಿಂತಿರುಗಿ ಬಂದ ದಿನ. 
 • 60 ವರ್ಷ ತುಂಬಿದ ನಂತರ  ಕೆಲವು ಮನೆತನಗಳಲ್ಲಿ 60 ವರ್ಷ ತುಂಬಿದ್ದಕ್ಕೆ ಆಚರಣೆ ಮಾಡುವುದು ಕೂಡ ರೂಢಿಯಲ್ಲಿದೆ. ಅದಕ್ಕೆ ಕಾರಣ ಈ 60 ಸಂವತ್ಸರಗಳನ್ನ ಆ ವ್ಯಕ್ತಿ ಕಂಡಿದ್ದಾನೆ ಅನ್ನುವುದು ಕೂಡ ಆಗಿದೆ.


ಹಿಂದೂ ಧರ್ಮದ ಪ್ರಕಾರ ಸಂವತ್ಸರಗಳು 60 ಇದ್ದು ಒಂದಾದ ಮೇಲೊಂದರಂತೆ  ಬರುತ್ತಿರುತ್ತವೆ. ಅವುಗಳ ಹೆಸರು ಈ ಕೆಳಗಿನಂತಿವೆ.


Sunday, 26 March 2017

ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿರುವ ಶಾಸನ ಮತ್ತು ಅದರಲ್ಲಿರುವ ಮಾಹಿತಿ

ಅನುವನಹಳ್ಳಿಯ ಬಗೆಗಿನ ನನ್ನ ಬರವಣಿಗೆಯಲ್ಲಿ, ಅಲ್ಲಿ ಸಿಕ್ಕಿರುವ ಶಾಸನದ ಬಗ್ಗೆ ಬರೆದಿದ್ದೆ. ಆದರೆ ಶಾಸನದ ಬಗ್ಗೆ ಹೆಚ್ಚು ಸೇರಿಸಲು ಆಗಿರಲಿಲ್ಲ. ಹಾಗಾಗಿ ಈ ಬರಹ.

ಮಯ್ಸೂರು ಸಂಸ್ತಾನದ ಪುರಾತತ್ವ ಶಾಸ್ತ್ರ (ಪಳಮೆಯರಿಮೆ) ಸಂಶೋಧನ ನಿರ್ದೇಶಕರಾಗಿದ್ದ, ಬಿ ಎಲ್ ರೈಸ್ ಅವರಿಂದ ಸಂಶೋಧನೆಗೊಂಡು, 1901ರಲ್ಲಿ ಮುದ್ರಣವಾದ, ಈ ಎಪಿಗ್ರಾಫಿಯಾ ಕಾರ್ನಾಟಿಕ ಎಂಬ ಹೊತ್ತಗೆಯಿಂದ ಈ ಶಾಸನ ಪಾಠವನ್ನ ಹೆಕ್ಕಿದ್ದೇನೆ.
ಶಾಸನದ ಪಾಠವನ್ನು ಇಂಗ್ಲೀಶ್ ಲಿಪಿಯಲ್ಲಿ ಬಿ ಎಲ್ ರೈಸ್ ಅವರು ನಮಗೆ ಕೊಟ್ಟಿದ್ದಾರೆ. ಇದನ್ನ ನಾನು ಹೊಸಗನ್ನಡ ಲಿಪಿಗೆ ಮಾರ್ಪಡಿಸಿ ಈ ಬ್ಲಾಗಿನಲ್ಲಿ ಹಾಕ್ತಾ ಇದ್ದೀನಿ. ಮತ್ತು ಈ ಶಾಸನದ ಪಾಠದ ಬಗ್ಗೆ ನನ್ನ ಅನಿಸಿಕೆಯನ್ನು ಬರಿತಾಯಿದೀನಿ.ಶಾಸನದ ಕನ್ನಡದ ರೂಪ :

ಶಾಸನ "ನಮಸ್ ತುಂಗ" ಎಂದು ಶಿವನಿಗೆ ನಮಿಸುವುದರ ಮೂಲಕ ಶುರುವಾಗುತ್ತೆ. ಬಾಣನ "ಹರ್ಷ ಚರಿತೆ" ಯ ಮೊದಲ ಶ್ಲೋಕ ಈ ಪದಗುಚ್ಚದ ಮೂಲ.  ಬಾಣನ ಎಲ್ಲ ಕೃತಿಗಳೂ ಈ ಶಿವನ ಸ್ತುತಿಯಿಂದ ಮೊದಲಾಗುತ್ತೆ.  ಕಾಳಿದಾಸ, ಉದ್ಘಟಯ್ಯ, ಮಯೂರ, ಹಲಾಯುಧ ರಂತ ದೊಡ್ಡ ಶಿವ ಕವಿಗಳ ಸಾಲಿನಲ್ಲಿ ನಿಲ್ಲುವವನು ಈ ಬಾಣ. ಹರಿಹರನೂ ಸೇರಿದಂತೆ ಕನ್ನಡದ ಅನೇಕ ಮಹಾಕವಿಗಳಿಗೆ ಮತ್ತೆ ಮತ್ತೆ ನೆನಪಾದವನು.

ಬಾಣನ ಆ ಶಿವ ಸ್ತುತಿಯ ಪೂರ್ಣ ಶ್ಲೋಕ ಕೆಳಗಿನಂತಿದೆ.  
ನಮಸ್ ತುಂಗ ಶಿರಸ್ ಚುಂಬಿ ಚಂದ್ರ ಚಾಮರ ಚಾರವೇ |
ತ್ರೈಲೋಕ್ಯ ನಗಾರಾರಂಭ ಮೂಲ ಸ್ತಂಬಾಯ ಶಂಬವೇ ||


ಶಾಸನದ ಮೊದಲ ಭಾಗ :
ಸ್ವಸ್ತಿ, ಸಮಧಿಗತ ಪಂಚ ಮಹಾಶಬ್ದ, ಮಹಾಮಂಡಲೇಶ್ವರಂ, ದ್ವಾರಾವತಿ ಪುರವರಾದೀಶ್ವರಂ, ಯಾದವ ಕುಲಂಬರ ದ್ಯುಮಣಿ ಸಂಯುಕ್ತವ ಚೂಡಾಮಣಿ ಮಲಪರೋಳ್ ಗಂಡ, ಮಲಪರೋಳ್ ಗಂಡೆದೆಯನೇಕ ನಾಮಾವಳಿ ಸಮಾಲಂಕೃತರ್ ಅಪ್ಪ ಶ್ರೀಮತ್ ಮಹಾಮಂಡಲೇಶ್ವರಂ ತ್ರಿಭುವನ ಮಲ್ಲ ಹೊಯ್ಸಳ ದೇವರು ಗಂಗವಾಡಿ ತೊಂಭತ್ತಾರು ಸಾಸಿರಮಂ ದುಷ್ಟ ನಿಗ್ರಹ ಶಿಷ್ಟ ಪ್ರತಿಪಾಲನದಿಂ ಆ ಚಂದ್ರಾರ್ಕ ತಾರಾಂಬರಮ್ ರಾಜ್ಯಂ ಸಲ್ಲುತಂ ಇರೆ||

ಪ್ರತಿ ಪದದ ಅರ್ಥ:
ಸ್ವಸ್ತಿ:        ಸ್ವ + ಅಸ್ತಿ : condition of well-being :
ಸಮಧಿಗತ ಪಂಚ ಮಹಾಶಬ್ದ:         one who has obtained the five great sounds : ನಮ: ಶಿವಾಯ ಅನ್ನುವ ಪಂಚಾಕ್ಷರಿ ಮಂತ್ರವನ್ನ ಒಲಿಸಿಕೊಂಡಿರುವವನು.
ಮಹಾಮಂಡಲೇಶ್ವರಂ:        ಮಹಾ ಮಂಡಲ ಈಶ್ವರಂ : Emperor, ಮಹಾ ರಾಜನು
ದ್ವಾರಾವತಿ ಪುರವರಾದೀಶ್ವರಂ :       Lord of the good city of dvaravati, ದ್ವಾರಾವತಿ ಎಂಬ ಪುರಕ್ಕೆ ಒಡೆಯನು
ಯಾದವ ಕುಲಂಬರ ದ್ಯುಮಣಿ:       sun in the sky of yadava clan,  ಯಾದವ ಕುಲವೆಂಬ ಬಾನಿನ ಭಾನು / ಯಾದವ ಕುಲದ ಸೂರ್ಯನು
ಸಂಯುಕ್ತವ ಚೂಡಾಮಣಿ :        A perfect head jewel
ಮಲಪರೋಳ್ ಗಂಡ :         champion over the Malapas
ಅನೇಕ ನಾಮಾವಳಿ ಸಮಾಲಂಕೃತರ್ :       Adorned with these and many other titles, ಅನೇಕ ಬಿರಿದುಗಳಿಂದ ಅಲಂಕೃತನಾದವನು
ಗಂಗವಾಡಿ ತೊಂಭತ್ತಾರು ಸಾಸಿರಮಂ:         having with great glory made the Gangavadi's ninety six thousand obedient to his sword, ಗಂಗವಾಡಿಯ ತೊಂಬ್ತಾರು ಸಾವಿರ ಜನರ ನಿಷ್ಠೆ ಗಳಿಸಿದ್ದ
ದುಷ್ಟ ನಿಗ್ರಹ ಶಿಷ್ಟ ಪ್ರತಿಪಾಲನದಿಂ ಆ ಚಂದ್ರಾರ್ಕ ತಾರಾಂಬರಮ್ ರಾಜ್ಯಂ ಸಲ್ಲುತಂ ಇರೆ:          ಶಿಷ್ಟ ಪರಿಪಾಲನೆ ಮತ್ತು ದುಷ್ಟ ನಿಗ್ರಹದಿಂದ, ಸೂರ್ಯ ಚಂದ್ರ ತಾರೆ ಆಕಾಶದವರೆಗೆ ರಾಜ್ಯ ಪಾಲನೆ ಮಾಡುತ್ತಾ ಇರುವ


ಶಾಸನದ ಎರಡನೆಯ ಭಾಗ :
ಸ್ವಸ್ತಿ ಸತ್ಯವಾಕ್ಯ ಕೊಂಗುಣಿವರ್ಮ, ಧರ್ಮ ಮಹಾರಾಜಾಧಿರಾಜ, ವಂದಿ ಜನ ಕಲ್ಪ ಭುಜ ಕೊಳಲಪುರವರಾಧೀಶ್ವರ, ಪ್ರಥಮ ಮಹೇಶ್ವರ, ನಂದಗಿರಿನಾಥ, ಮನುಜ ಮಾಂದಾತ, ನನ್ನಿಯ ಗಂಗ,  ಜಯದ್ಉತ್ತರಾಂಗ, ಮದಗಜೇಂದ್ರ ಲಾಂಚನ,   ವಿನಿಯೋಗ ಕಾಂಚನ, ಪದ್ಮಾವತಿ ದೇವಿ ಲಬ್ದ ವರಪ್ರಸಾದ ಮೃಗೋಮದಾಮೋದ ರಿಪು ನಿವಾಹ ಕಂಜ ವನ ಕುಂಜರ,   ಗಂಗಕುಲಕಮಲಾಮಾರ್ತಾಂಡ  ಅನಿಯೋಡೆ ಗಂಡ ಕೋದಂಡ ಪಾರ್ಥ ರಣರಂಗ, ಧೀರ ಬಿಲ್ಲಾಂಕಕಾರ, ಪರಮಂಡಲ ಸುರೆಕಾರ, ಈಶ್ವಾರಾದಿತ್ಯ ಕಣ್ಣಅಂಬಿನಾತ, ಆಹ್ವ ಜತ್ತಳಟ್ಟ ವೈರಿಗರಟ್ಟ, ಶರಣಾಗತ ವಜ್ರ ಪಂಜರ, ವೈರಿ ದಿಕ್ ಕುಂಜರ, ಕ್ಷತ್ರಿಯ ಪವಿತ್ರ ಮನುಜ ಮಾಂಧಾತ, ಪರಬಲಾ ಭಯಂಕರ,  ಸತ್ಯ ರತ್ನಾಕರ ಬಂಟರ ಬಾವಾ, ಮರೆವುಗೆ ಕಾವ, ತಪ್ಪೆ ತಪ್ಪುವರ ನಾಮದಿ ಸಮಸ್ತ ಪ್ರಶಸ್ತಿ ಸಹಿತ, ಶ್ರೀ ಮಹಾಮಂಡಲಿಕ ವೈಜರಸರು ಆಸಂದಿಯ ನೆಲೆವೀಡಾಗಿ ಸುಖಸಂಕಟ ವಿನೋದದಿಂ ರಾಜ್ಯಂ ಗೆಯ್ಯುತಂ ಇರೆ ||

ವಿವರಣೆ:
ಕೊಂಗುಣಿ ವರ್ಮ ಗಂಗ ರ ಮೂಲ ಪುರುಷ.  ಸತ್ಯವಾಕ್ಯ, 'ಧರ್ಮ ಮಹಾರಾಜಾಧಿರಾಜ' ಮುಂತಾದವೆಲ್ಲ ಈತನ ಬಿರುದುಗಳು."ನನ್ನಿಯ ಗಂಗ" ಎನ್ನುವ ಬಿರುದು ಈತ ಗಂಗದೊರೆ ಅನ್ನುವದನ್ನ ಊಹಿಸಲು ಸಹಾಯಕ್ಕೆ ಬರುತ್ತೆ,
ವೈಜರಸ ಎಂಬುವವನು ಆಸಂದಿಯನ್ನು ನೆಲೆಬೀಡಾಗಿ ಮಾಡಿ ಕೊಂಡು, ಕೊಂಗುಣಿವರ್ಮನ ಕೆಳಗೆ ಮಹಾ ಮಂಡಲೀಕನಾಗಿ ರಾಜ್ಯಭಾರ ಮಡುತ್ತಿದ್ದವ.


ಶಾಸನದ ಮೂರನೆಯ ಭಾಗ : 
ಸ್ವಸ್ತಿ ಸಮಸ್ತ ಗುಣಸಂಪನ್ನ, ನುಡಿದು ಮತ್ತೆನ್ನಮ್ ಗೋತ್ರಪವಿತ್ರಂ, ಪರಾಂಗಣ ಪುತ್ರ,  ಸತ್ಯ ರತ್ನಾಕರ, ಕೂಡಿ ಕೂಟಕೆ ತಪ್ಪುವರ ಗಂಡ, ಹೆರಗೆ ಹಳಿವರ ಗಂಡ, ಶಿವಪದಶೇಖರ ಶ್ರೀಮಾತು ಕಾಳಗೌಡನ ಮದವಳಿಗೆ ಕಾಲಗೌಡಿ ಇವರ ಸುಪುತ್ರ ಕೊಲದೀಪಕ, ಸತ್ಯರಾಧೇಯ ನುಡಿದಂತೆ, ಗಂಡ ಶ್ರೀಮಾತು ಆಳಗೌಡನ ಮದವಳಿಗೆ ದುಗ್ಗಗೌಡಿಯರು ಬಂದು ಬೇಡಿದಡ್ ಇಲ್ಲನಲು, ಆಗೌಡನ ಮಗ ಕಾಳಗೌಡ ಗೋತ್ರ ಕುಲತಿಲಕ, ಹಿರಿಯ ಬೈಲಾಲು ಕಂಡುಗ 2 ಇನಿಸುವಂ ಆಳಗೌಡನ ಮಗಂ ಕಾಲಗೌಡನು ತಂದೆಯೂ ಮಗನೂ ಇಬ್ಬರು೦ವಿದ್ದು, ಕಾಲ ಕಚ್ಚಿ ದಾರ ಪೂರ್ವ ಮಾಡಿದರು. ಅಮೃತ ಶಕ್ತಿ ಪಂಡಿತರಿಗೆ
ಸ್ವಸ್ತಿ ಶ್ರೀಮತ್  ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲ ಆಳ್ವಿಕೆಯ ೩ನೇ ವರ್ಷದ, ಶುಕ್ಲ ಸಂವತ್ಸರದ ಫಾಲ್ಗುಣ ಶುಧ್ಧ ಪುಣ್ಣಮಿ ಸೋಮವಾರದಂದು ಬಿಟ್ಟರು |

ವಿವರಣೆ:
ಕಾಳ ಗೌಡನನ್ನು ಅವನಿಗಿದ್ದ ಬಿರುದುಬಾವಲಿಗಳ ಜೊತೆ ಪರಿಚಯ ಮಾಡಿಕೊಡಲಾಗಿದೆ. ಕಾಳಗೌಡ ಮತ್ತು ಕಾಳ ಗೌಡಿ ಯರ ಮಗ ಆಳ ಗೌಡ. ಈ ಆಳಗೌಡ ಮತ್ತವನ ಹೆಂಡತಿಯ ಮಗನೇ ಮೇಲಿನ ಎಲ್ಲ ಬಿರುಗಳನ್ನು ಹೊಂದಿರುವವ. ಆಳಗೌಡ ಮತ್ತವನ ಮಗ ಕಾಲ ಗೌಡರು ಇಬ್ಬರೂ ಇದ್ದು ದಾರೆ ಎರೆದು ದಾನ ಮಾಡಿ ಕೊಟ್ಟರು ಅನ್ನುವ ಬಿವರಣೆ ಇಲ್ಲಿದೆ. ಇದು ಚಾಲುಕ್ಯ ಚಕ್ರವರ್ತಿ ಜಗದೇಕಮಲ್ಲನ ಆಳ್ವಿಕೆಯ ಮೂರನೇ ವರ್ಷದಲ್ಲಿ, ಶುಕ್ಲ ಸಂವತ್ಸರ, ಪಾಲ್ಗುಣ ಶುದ್ದ ಹುಣ್ಣಿಮೆ ಯಾ ಸೋಮವಾರದಂದು ದಾರೆ ಎರೆದು ಕೊಟ್ಟರು / ದಾನಕ್ಕೆ ಬಿಟ್ಟರು.    

ಶಾಸನದ ಕೊನೆಯ ಭಾಗ : 
ತುಂಬಿನ ಗದ್ದೆ, ಬಾಗೆಯ ಕೆರೆಯ ಕಂಡುಗ, ಹಿರಿಯ ಕೆರೆಯ ಕೆಳಗೆ ಹತ್ತು ಕೊಳಗ,  ಹೆಗ್ಗಡೆ- ರಾಚಿಮಯ್ಯನು, ಆಳಗೌಡನು ಇಬ್ಬರುಂ ವಿದ್ದು ಬಿಟ್ಟರು. ಕೇತೋಜನ ಪುತ್ರ ದೇಕೋಜಗೆ ಬಿಟ್ಟರು.

ವಿವರಣೆ:
ಹೆಗ್ಗಡೆ ರಾಚಿಮಯ್ಯ ಮತ್ತು ಆಳಗೌಡ ಇಬ್ಬರೂ ಇದ್ದು, ತುಂಬಿನ ಗದ್ದೆ, ಬಾಗೆಯ ಕೆರೆ ಬದಿಯ ಕಂಡುಗ ಹೊಲ,  ಹಿರಿ ಕೆರೆಯ ಕೆಳಗಿನ ಹತ್ತು ಕೊಳಗದಷ್ಟು ಹೊಲವನ್ನು, ಕೇತೋಜನ ಮಗ ದೇಕೋಜನಿಗೆ, ದಾರೆ ಎರೆದು ಬಿಟ್ಟು ಕೊಟ್ಟರು.


ಸಾರಾಂಶ: 
 • ಇದೊಂದು ದತ್ತಿ ಶಾಸನ. 
 • ಈ ಶಾಸನದ ಆರಂಭವು 'ನಮಸ್ತುಂಗ' ಎಂಬ ಶಿವ ಸ್ತುತಿ ಮೂಲಕ ಆರಂಭವಾಗುತ್ತದೆ. ಇಲ್ಲಿ ಶಿವ ಭಕ್ತರ ಪ್ರಭಾವ ಹೆಚ್ಚಿತ್ತೆಂದು ತಿಳಿಯಬಹುದು. ಆ ಶಾಸನದ ಮೇಲ್ಭಾಗದಲ್ಲೂ ಕೂಡ ನಾವು ಶಿವಲಿಂಗವನ್ನು  ಮತ್ತು ಅದಕ್ಕೆ ನಮಿಸುತ್ತಿರುವ ಗೋವು ಮತ್ತು ಮನುಷ್ಯನ ಆಕೃತಿಯನ್ನು ಕಾಣಬಹುದಾಗಿದೆ.
 • ಇನ್ನು ಶಾಸನದ ಪೀಠಿಕೆಯಲ್ಲಿ ಗಂಗರ ಮೂಲ ಪುರುಷ ಕೊಂಗುಣಿ ವರ್ಮನ ಉಲ್ಲೇಖವಿದೆ. ಈತ ಈ ಭಾಗದ ಸಾಮಂತ ರಾಜನಾಗಿದ್ದರಬಹುದು. 
 • ಆಸಂದಿಯಿಂದ ಆಳುತ್ತಿದ್ದ ಮಹಾ ಮಂಡಳೀಕ ವೈಜರಸನ ಉಲ್ಲೇಖವಿದೆ. ಇಡೀ ರಾಜ್ಯವನ್ನು ಹಲವು ಮಂಡಲಗಳಾಗಿ ವಿಭಾಗ ಮಾಡಿ ಆಳ್ವಿಕೆ ಮಾಡಲಾಗುತ್ತಿತ್ತು ಎನ್ನುವುದು ತಿಳಿಯುತ್ತೆ. 
 • ಚಾಲುಕ್ಯ ರಾಜ ಜಗದೇಕಮಲ್ಲನ  ಹಲವು ನಾಮಾವಳಿಗಳಿಂದ ಹೊಗಳಿರುವುದನ್ನು ಗುರುತಿಸಲಾಗಿದೆ. ಇವನು ಆ ಪ್ರದೇಶಕ್ಕೆ ಚಕ್ರವರ್ತಿಯಾಗಿದ್ದ ಎಂದೆನಿಸುತ್ತದೆ.
 • ಆಳ ಗೌಡ ಮತ್ತು ಕಾಳ ಗೌಡರು ದಾರೆ ಎರೆದು ಕೊಡುವ ಉಲ್ಲೇಖವಿದೆ. ಇವರು ಊರ ಆಳ್ವಿಕೆ ಮಾಡುತ್ತಿದ್ದ (ಗೌಡಿಕೆ)ವರಿರಬೇಕು.
 • ದಾನ ಪಡೆಯುವ ಕೇತೋಜ ಮತ್ತು ದೇಕೋಜ ಹೆಸರುಗಳು ಈ ಪ್ರದೇಶದಲ್ಲಿ ಈಗಂತೂ ಬಳಕೆಯಲ್ಲಿಲ್ಲ.  ಅಲ್ಲಿ ಅತಿ ಪ್ರಮುಖವಾಗಿರುವ ಶೈವ ಸಂಪ್ರದಾಯಕ್ಕೆ ಹೊರಗಿನ ಹೆಸರುಗಳಂತೆ ಕಾಣುತ್ತಿವೆ. 
 • ಶಾಸನದ  ಬಿರುದಿನ ಭಾಗ ಸಂಸ್ಕತಮಯಾಗಿದ್ದರೆ, ಶಾಸನನ ಮುಖ್ಯ ಭಾಗ ಕನ್ನಡಮಯವಾಗಿದೆ. ಆಡುಗನ್ನಡಲ್ಲಿದೆ 
 • ಕಂಡುಗ, ಕೊಳಗ ಮುಂತಾದ ನೆಲದ ವಿಸ್ತೀರ್ಣವನ್ನ ಅಳೆಯುವ ಯುನಿಟ್ ಗಳ  ಉಲ್ಲೇಖವಿವೆ. 
 • ಇಲ್ಲಿ ಎರೆಡು ಕೆರೆಗಳ ಉಲ್ಲೇಖವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಊರಿನಲ್ಲಿರುವುದು  ಒಂದೇ ಕೆರೆ.  


Tuesday, 14 February 2017

ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿ ರೋಮನ್ನರ ಮತ್ತು ಶಾತವಾಹನರ ಹೆಜ್ಜೆ ಗುರುತುಗಳು

'ಅನುವನಹಳ್ಳಿ' ಎಂಬುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ಒಂದು ಚಿಕ್ಕ ಹಳ್ಳಿ. ಒಂದು ಸಾವಿರಕ್ಕಿಂತ ಸ್ವಲ್ಪ ಹೆಚ್ಚು ಜನರಿರಬಹುದೇನೋ!

ಈ ಊರಿಗೆ ತುಂಬಾ ಹಳೆಯ ಅಂದರೆ ರೋಮನ್ನರ ಮತ್ತು ಶಾತವಾಹನರ ಕಾಲದ ಇತಿಹಾಸ ಇರುವುದು ಇತ್ತೀಚಿಗೆ ಬೆಳಕಿಗೆ ಬಂದಿರುವ ವಿಷಯ. ಇಲ್ಲಿ ನಾಗರೀಕತೆ, ಜನಜೀವನ ಕಡಿಮೆ ಅಂದರೂ ಕ್ರಿಸ್ತ ಪೂರ್ವ 3ನೆ ಶತಮಾನದಿಂದಲೇ ಇದೆ ಎಂದು ಹೇಳಬಹುದು. ಇಲ್ಲಿ ಶಾತವಾಹನರ ಆಯುಧಾಗರ ಅತ್ವ ಆಯುಧ ನಿರ್ಮಾಣ ಮಾಡುವ ಕಾರ್ಖಾನೆ ಇತ್ತು ಅನ್ನುವುದು ಒಂದು ವಾದವಾದರೆ, ಇಲ್ಲಿನ ಕಾಡಲ್ಲಿ ಬೆಳೆಯುತ್ತಿದ್ದ ಗಿಡ ಮೂಲಿಕೆಗಳನ್ನ ಬಳಸಿಕೊಂದು ಔಷಧಗಳನ್ನ ತಯಾರಿಸುತ್ತಿದ್ದ ಕಾರ್ಖಾನೆ ಇತ್ತು ಅನ್ನುವುದು ಇನ್ನೊಂದು ವಾದ.  

ಅನುವನಹಳ್ಳಿಯಲ್ಲಿ  ರೋಮನ್ನರ ನಾಣ್ಯಗಳು.
ಕರ್ನಾಟಕದಲ್ಲಿ ಈ ಶತಮಾನದಲ್ಲಿ ಇದೇ  ಮೊದಲ ಬಾರಿಗೆ ರೋಮನ್ನರ ನಾಣ್ಯಗಳು ದೊರೆತದ್ದು ಈ ಊರಲ್ಲೇ. ಇದಕ್ಕೂ ಮೊದಲು 1909 ರಲ್ಲಿ ಚಂದ್ರವಳ್ಳಿಯಲ್ಲಿ ದೊರೆತಿದ್ದವು. ಅನುವನಹಳ್ಳಿಯ ಹಾಳೂರು ಎಂಬಲ್ಲಿ ತಮ್ಮ ಜಮೀನಿನಲ್ಲಿ A.V. ಜಯಣ್ಣ ಎಂಬ ರೈತ ಮೊದಲು ಆ ಹಾಳೂರು ಜಾಗದಲ್ಲಿ 1990-91 ರಲ್ಲಿ ವಿವಿಧ ರೂಪದ ಮಡಿಕೆ ಚೂರುಗಳನ್ನು ನೋಡುತ್ತಾರೆ. ಅಲ್ಲಿ ಸಿಕ್ಕ ವಸ್ತುಗಳ ಬಗ್ಗೆ ಪುರಾತತ್ವ ಇಲಾಖೆಗೆ ಹಲವು ಬಾರಿ ಪತ್ರ ಬರೆಯುತ್ತಾರೆ. ಇದರ ಜಾಡು ಹಿಡಿದು ಮೈಸೂರಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ 60 ವಿದ್ಯಾರ್ಥಿಗಳ ತಂಡವೊಂದು,  N.S. ರಂಗರಾಜು ಎಂಬ ಪ್ರೊಫೆಸರರ ಮುಂದಾಳತ್ವದಲ್ಲಿ ಅಲ್ಲಿ ಸಂಶೋಧನೆ ನಡೆಯುತ್ತದೆ. ಆ ಅನುವನಹಳ್ಳಿಯ ಹಾಳೂರಿನ 35 ಎಕರೆ ಪ್ರದೇಶವನ್ನು ಸಂಶೋಧನೆ ನಡೆಸಿದಾಗ ಅಲ್ಲಿ ಶಾತವಾಹನರ ಮತ್ತು ರೋಮನ್ನರ ಹೆಜ್ಜೆಗುರುತುಗಳಿಗೆ ಸಾಕ್ಷಿಯಾಗಿ ಅನೇಕ ವಸ್ತುಗಳು ಬೆಳಕಿಗೆ ಬರುತ್ತವೆ. ಆ ತಂಡವು ಸಂಶೋಧನೆ ನಡೆಸಿದಾಗ ಅಲ್ಲಿ ರೋಮನ್ನರ 4 ಬೆಳ್ಳಿ ನಾಣ್ಯಗಳು ಮತ್ತು ಮಡಿಕೆ ಕುಡಿಕೆಗಳ ಚೂರುಗಳು ಅಲ್ಲಿ ದೊರೆತಿವೆ. ಅಲ್ಲದೆ ಹಲವು ಆಕಾರದ ಮತ್ತು ಹಲವು ತೂಕದ ಕಲ್ಲುಗಳು ದೊರೆತಿವೆ.

ಈ ಊರಿನಲ್ಲಿ ಕ್ರಿಸ್ತಪೂರ್ವದ.. ಅದೂ ದೂರದ ರೋಮನ್ನರ ನಾಣ್ಯಗಳು ಸಿಕ್ಕಿವೆ ಅಂದರೆ ಏನರ್ಥ?!. ಆಗಲೇ ಇಲ್ಲಿ ವ್ಯಾಪಾರ ಏರ್ಪಟ್ಟಿತ್ತು, ಈ ವ್ಯಾಪಾರದ ಉದ್ದೇಶದಿಂದ ಹೊರಗಿನವರು ಇಲ್ಲಿನರೊಂದಿಗೆ ನಂಟನ್ನು ಹೊಂದಿದ್ದರು ಅನ್ನುವುದು ಅನ್ನುವುದೇ ಅರ್ಥ!!   ಇಲ್ಲಿ ಹೊರ ರಾಜ್ಯಗಳ / ದೇಶಗಳ ನಾಣ್ಯಗಳು ಸಿಗುತ್ತವೆ ಅಂದರೆ ಏನನ್ನು ಕೊಂಡುಕೊಳ್ಳಲು ಆ ಜನ ಇಲ್ಲಿಗೆ ಭೇಟಿ ಕೊಟ್ಟಿರಬಹುದು ಅನ್ನುವುದನ್ನ ಹುಡುಕುತ್ತ ಹೋದಂತೆ ನಮಗೆ ಎರಡು ಸಾಧ್ಯತೆಗಳು ಕಾಣುತ್ತವೆ.   ಒಂದು ಇಲ್ಲಿನ ಆಯುಧ ಕಾರ್ಖಾನೆ ಇಂದೊಂದು ಇಲ್ಲಿನ ಕಾಡಿನಲ್ಲಿ ಸಿಕ್ಕುತ್ತುತ್ತಿದ್ದ ಗಿಡಮೂಲಿಕೆಗಳಿಂದ ತಯಾರಾಗುತ್ತಿದ್ದ ಔಶಧಗಳ ವ್ಯಾಪಾರ!

ಅನುವನಹಳ್ಳಿಯಲ್ಲಿ ಶಾತವಾಹನರ (ಕ್ರಿಸ್ತ ಪೂರ್ವ ೩ನೇ ಶತಮಾನ) ಕಾಲದ ಆಯುಧಗಳು!


ಅನುವನಹಳ್ಳಿಯಲ್ಲಿ ಸಿಕ್ಕಿರುವ  ಪುರಾತತ್ವ ವಸ್ತುಗಳು ಅನುವನಹಳ್ಳಿಯಲ್ಲಿ ದೊರೆತಿರುವ ರೋಮನ್ನರ ಬೆಳ್ಳಿ ನಾಣ್ಯಗಳು

ನಾಣ್ಯಗಳಲ್ಲದೆ ಕೆಲವೊಂದು ಆಯುಧಗಳು ಸಲಕರಣೆಗಳೂ ಈ ಊರಲ್ಲಿ ದೊರೆತಿದ್ದು ಅವು ಕ್ರಿಸ್ತ ಪೂರ್ವ 1200 ರಿಂದ ಕ್ರಿ.ಪೂ 800 ರವು ಎಂದು ತಿಳಿದು ಬಂದಿದೆ. ಅಲ್ಲಿ 20 ಕ್ಕೂ ಹೆಚ್ಚು ಪಾಲಿಶ್ ಆಗಿರುವ ಆಯುಧಗಳು ಮತ್ತು ಆಗಿನ ಬೆಣಚುಕಲ್ಲಿನ ಸುಣ್ಣಗಳು. ಕಚ್ಚಾವಸ್ತುಗಳ, ಚಕ್ಕೆಯ ಆಯುಧಗಳನ್ನು ತೆಗೆದಿರುವ ಕೋರ್ ಗಳು, ಇಲ್ಲಿ ಹೇರಳವಾಗಿ ದೊರೆತಿವೆ. ಈ ಎಲ್ಲ ಅಂಶಗಳನ್ನ ಗಮನಿಸಿದರೆ ಇಲ್ಲಿ ಸೂಕ್ಷ್ಮ ಕಲ್ಲಿನ ಆಯುಧಗಳನ್ನು ತಯಾರಿಸುವ ಕೈಗಾರಿಕೆ ಇತ್ತೆಂದು ಕಂಡುಬರುತ್ತದೆ ಎಂದು ರಂಗರಾಜು ಅವರು ಅಭಿಪ್ರಾಯ ಪಟ್ಟಿದ್ದಾರೆ.

ನವ ಶಿಲಾಯುಗದ ಸಂಸ್ಕೃತಿ ಹಾಗೂ ಬೃಹತ್ ಶಿಲಾಯುಗದ ಅನೇಕ ವಸ್ತುಗಳು ಇಲ್ಲಿ ದೊರೆತಿವೆ. ಅನುವನಹಳ್ಳಿಯಿಂದ 10 ಕಿ.ಮೀ. ದೂರದ ಚನ್ನಗಿರಿ ತಾಲ್ಲೂಕಿನ ಬಸವಾಪುರದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕಬ್ಬಿಣದ ಅದಿರನ್ನು ಕರಗಿಸಿ ಮಣ್ಣಿನ ಕೊಳವೆಗಳ ಮೂಲಕ ಸಂಗ್ರಹಿಸಿರುವುದು  ಕಂಡುಬಂದಿದೆ. ಇಲ್ಲಿ  ಬೃಹತ್ ಶಿಲಾಯುಗದಲ್ಲಿ  ಕಬ್ಬಿಣ ತಯಾರಿಸುವ ಕೈಗಾರಿಕೆ ಇರುವುದನ್ನು ತೋರಿಸಿದೆ ಎಂದು ರಂಗರಾಜು  ಅಭಿಪ್ರಾಯ ಪಟ್ಟಿದ್ದಾರೆ. 800 BC -400 BC ಯಲ್ಲಿ ಕಬ್ಬಿಣ ಯುಗದಲ್ಲಿ ಬಳಸಿರಬಹುದಾದ ಆಯುಧಗಳು ಅವು ಎಂದು ಹೇಳಿದ್ದಾರೆ. 30 ಶಾತವಾಹನರ ನಾಣ್ಯಗಳು ದೊರೆತಿವೆ. ಇವಲ್ಲದೆ ಶಾತವಾಹನರ ಕಾಲದ ಅನೇಕ ಮಡಿಕೆಯ ಚೂರುಗಳು,ಸುಟ್ಟ ಮಣ್ಣಿನ ಗೊಂಬೆಗಳು, ದಂತ, ಬೆಲೆಬಾಳುವ ಮಣಿಗಳು, ಬಳೆ ಚೂರುಗಳು ಪತ್ತೆಯಾಗಿವೆ.

ಅನುವನಹಳ್ಳಿಯಲ್ಲಿ ಔಷಧ ತಯಾರಿಕೆ  
ಚಿಕ್ಕಮಗಳೂರು ಜಿಲ್ಲೆಯು ಹಲವು ಸಸ್ಯವರ್ಗಗಳಿಗೆ ಮೊದಲಿನಿಂದಲೂ ತುಂಬಾ ಜನಪ್ರಿಯ. ಆದ್ದರಿಂದ ಈ ಪ್ರದೇಶವು ಶಾತವಾಹನರ ಕಾಲದಲ್ಲಿ ಆರೋಗ್ಯ ಕೇಂದ್ರವಾಗಿತ್ತೆಂದು ನಂಬಿದ್ದಾರೆ. ಆ  ಕಾಲದಲ್ಲಿ ಭಾರತಕ್ಕೆ ಬಂದಿದ್ದ ರೋಮನ್ನರು ಇಲ್ಲಿಯ ಗಿಡಮೂಲಿಕೆಯಿಂದ ತಯಾರಿಸುವ  ಔಷಧಗಳನ್ನ ತಮ್ಮ ದೇಶಕ್ಕೆ ರಫ್ತು ಮಾಡುವ ಸಲುವಾಗಿ ಇಲ್ಲಿಗೆ ಬಂದಿರಬಹುದು ಎಂದು ಹೇಳಿದ್ದಾರೆ.

ಇದಲ್ಲದೆ 1881 ರಿಂದ 1886 ರಲ್ಲಿ Bruce Foote ಎಂಬ ವಿದೇಶಿ ಸಂಶೋಧಕ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಲಿಂಗದಹಳ್ಳಿ, ನಿಡಘಟ್ಟ, ಸಖರಾಯಪಟ್ಟಣ, ಕಾಲದುರ್ಗಗಳಲ್ಲಿ ಓಡಾಡಿ ಶಿಲಾಯುಗದಲ್ಲಿ ಮಾನವ ಬಳಸಿದ್ದ ಕೈಯಿ೦ದ ಬಳಸುವ ಕಲ್ಲಿನ ಆಯುಧಗಳು ಮತ್ತು ಹಸ್ತಕೃತಿಗಳನ್ನು ಬೆಳಕಿಗೆ ತಂದಿದ್ದ .

ಅನುವನಹಳ್ಳಿ - ಹೆಸರಿನ ಹಿನ್ನೆಲೆ. 

'ಅನುವನಹಳ್ಳಿ' ಎಂಬ ಹೆಸರು ಕೇಳಲು ತುಂಬಾ ಅಪರೂಪದ ಪದ ಅಂತ ಅನಿಸುತ್ತೆ. ಆ  ಊರಿಗೆ ಅನುವನಹಳ್ಳಿ ಎಂಬ ಹೆಸರು ಹೇಗೆ ಬಂತು ಎಂದು ಹಿರಿಯರನ್ನು ಕೇಳಿದಾಗ "ಎಲ್ಲದಕ್ಕೂ ಅನುವಾಗಿರುವ ಹಳ್ಳಿ - ಅನುವನಹಳ್ಳಿ" ಎಂದು ಹೇಳುವುದುಂಟು. ಅಚ್ಚಗನ್ನಡ ಪದವಾದ "ಅನುವು" ಪದದ ಅರ್ಥ ಹೀಗಿದೆ. Ka. anu, anuvu, anavu fitness, propriety, nicety, loveliness, that is pleasing, charming or beautiful, worth, merit, readiness, success, proper or correct way, scheme, device.  "ಹಳ್ಳಿ"  ಅನ್ನೋ ಪದಕ್ಕೆ hermitage, temple (esp. of Buddhists and Jains), palace, workshop, sleeping place, school, room ಅನ್ನೋ ಮೂಲ ಅರ್ಥದ ಜೊತೆ Ka. paḷḷi, haḷḷi settlement, abode, hamlet, village ಅನ್ನೋ ಅರ್ಥವಿರುವುದೇ ಎಲ್ರಿಗೂ ತಿಳಿದೇ ಇದೆ.

"ವನಕ್ಕೆ ಅನುವಾಗಿ ಬೆಳೆದಿರುವ ಹಳ್ಳಿ ಅನುವನಹಳ್ಳಿ" ಎಂದು ಕೂಡ ಕೆಲವರು ಹೇಳುವರು. ಇಲ್ಲಿ ಮೂಲತಹ ಔಷಧ ಗಿಡ ಮೂಲಿಕೆಗಳ ಕಾಡು ಇದ್ದಿರಬಹುದು.
ಅನುವನಹಳ್ಳಿ ಶಾಸನ: 

ಕ್ರಿಸ್ತ ಶಕ ೧೧೪೧ ರದ್ದು ಎನ್ನಬಹುದಾದ ಶಾಸನ ಈ ಊರಿನ ಅಮೃತೇಶ್ವರ ದೇವಾಲಯದಲ್ಲಿ ಸಿಕ್ಕಿದೆ. ಈ ಶಾಸನನ ಪೂರ್ಣ ಪಾಠ ಈ ಕೆಳಗಿನ ಕೊಂಡಿಯಲ್ಲಿ ಇದೆ.   
https://archive.org/stream/epigraphiacarnat06myso/epigraphiacarnat06myso_djvu.txt


65 

At Anuvanahalli (^ame hobli), on a stone io the right of the Amrit^kvara temple. 
namas tunga &c. |1 

svasti samadliigata-pancha-maha-sabda maha-mandalesvaram Dvai’avati-pura-varadhisvaram Yadava- 
kulambara-dyumani samyaktva-cbudamani malaparolganda malara bal-gandady-aneka-namavali-sama- 
lankritan appa Siiman-maha-maiidalesvararp Tribhuvana-malla Hoysala-Devaru Gangavadi-tombha- 
ttaru-saairama diishta-nigra[i)a]-si3hta-pratipalanadiii a-chandrakka-taram-bara rajyam saluttam ire|[ 
svasti Satyavakya Kougulivarmma dharmma-malik’ajadhiraja vaiidi-jana*kalpa-bhuja Kolala-pura- 
varadbisvara prathama-Mahesvara Nandagiri-natha manuja-Mandbata nanniya-Gauga jayad-uttaranga 
mada-gajendi'a-laachana viaiydga-kafichana Padinavati- de vi-labdha-vara-prasada mrigamadamoda 
ripu-nivahakam dbaua. . . . Ganga-kula-kamala-marttanda aniyode ganda '''Kodauga-bartya rana-ranga. 
dbira bil-anka-kara para-mandala-surekara esuvar aditya kann-arabiaata ahava-jattalatta vairi-gbara- 
tta saranagata-vajra-panjara vairi-dik-kuujarakehatriya-pavitra manuja-Mandliata para-bala-bbayan- 
kara satya-ratnakara bantara bava marevuge kava tappe tappuva namadi-samasta-pra§asti-sahita Sri- 
maba-mandalika-Vaijarasaru Asandiya nelavidagi sukba-sankatba-vinodadim rajyam geyyuttam ire | 
svasti samasta-guua-sam[paani] nudidu matt enaa(dagam) gotra-pavitram paraugana-putra satya- 
ratoakara kudi kutake tappuvara ganda berage balivara ganda S'iva-pada-sekara srimatu Ka}a-Gau- 

^ A 

dana madavahge Kala-Gaudi ivara su-putra-kola-dipaka satya-Radheya nudidante ganda Srimatu Ala- 
Gaudana madavalige Dugga-Gaiidi aru banda bedidad illannalu a-gaudana maga Kala-Gauda gotra- 
kula-tilaka biriya-bailalu kanduga 2 {here follow further details of gift) inisuvam Ala-Gaudana magam 
Kala-Gaudanu tandeb maganu ibbarum viddu kala kacbcbi dhara-purvva madidaru Amritasakti- 
panditarige {uswxl final verse) svasti srima[tu] Chalukya-chakravartti-Jagadekamalla-varSada ? 3 neya 
S'ukla-saravatsarada Palguna-suddba-punnami-Somavarad andii bittaru i tumbiua gadde Bageya- 
kereya kanduga biriya-kereya kelagc hattu kolaga heggf de-Racbimeyanu Ilala-Gaudanu ibbarum viddu 
bittaru Ketojana patra Dekojage bittaru {usual final phrases) ಅನುವನಹಳ್ಳಿ ಊರಿನ ಈಗಿನ ಜನ ಜೀವನದ ಚಿತ್ರಣ:

ಇಲ್ಲಿ ಅರೆಮಲೆನಾಡಿನ ವಾತಾವರಣ ಇರುತ್ತದೆ. ತೆಂಗು, ಅಡಿಕೆ, ಬಾಳೆ, ಈರುಳ್ಳಿ, ಕಡ್ಲೆ, ರಾಗಿ, ಜೋಳ, ಹುರಳಿ, ಮುಂತಾದವುಗಳನ್ನು ಮುಖ್ಯ ಬೆಳೆಗಳಾಗಿ ಬೆಳೆಯುತ್ತಾರೆ. ಜನರ ಮುಖ್ಯ ಕಸುಬು ವ್ಯವಸಾಯವಾಗಿದೆ.

ಇಲ್ಲಿ ಬಸವಣ್ಣ, ಅಮೃತೇಶ್ವರ, ಶ್ರೀರಾಮ, ಬೊಮ್ಮ ದೇವರು, ಬೀರಪ್ಪ, ಅಜ್ಜಯ್ಯ, ಇನ್ನು ಅನೇಕ ಗುಡಿಗಳಿವೆ. ವರ್ಷಕ್ಕೊಮ್ಮೆ ವರ್ಷಕ್ಕೊಮ್ಮೆ ನಡೆಯುವ ಇಲ್ಲಿ ನಡೆಯುವ  ಉಮಾಮಹೇಶ್ವರನ ಜಾತ್ರೆ ಪ್ರಸಿದ್ಧಿ. ಈ ಸಮಯದಲ್ಲಿ ಇಲ್ಲಿ ದೊಳಿಯಪ್ಪನ ಪೂಜೆ ಮತ್ತು ಮೆರವಣಿಗೆ ಊರತುಂಬ ನಡೆಯುತ್ತೆ. ಇದು ಕರಾವಳಿ ಪ್ರದೇಶಗಳಲ್ಲಿ ನಡೆಯುವ ಭೂತಾರಾಧನೆಯನ್ನು ಹೋಲುತ್ತದೆ. ದೊಳಿಯಪ್ಪನನ್ನು ಪೂಜಿಸುವ ಮತ್ತು ಆಹ್ವಾನಿಸುವ ರೂಢಿ ಒಂದು ಕುಲಕ್ಕೆ ಮಾತ್ರ ಸೀಮಿತವಾಗಿದೆ. ಆ ಕುಟುಂಬದಲ್ಲಿ ಸಾಂಪ್ರದಾಯಿಕವಾಗಿ ಒಬ್ಬ ಪುರುಷನನ್ನು ದೊಳಿಯಪ್ಪನಿಗೆ ಬಿಡುತ್ತಾರೆ.  ಹೀಗೆ ಯಾವ ಮೇಲು ಕೀಳು ಎಂಬ ಭೇದವಿಲ್ಲದೆ ಊರಿನ ಎಲ್ಲ ಜನರು ದೊಳಿಯಪ್ಪನಿಗೆ ಪೂಜೆ ಸಲಿಸುತ್ತಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಳಿಕೊಳ್ಳುತ್ತಾರೆ. ಹಾಗೆ ಅದು ಈಡೇರಿದಾಗ ಮುಂದಿನ ವರ್ಷದ ಜಾತ್ರೆಯಲ್ಲಿ ತಮ್ಮ ಮನೆಮುಂದೆ ದೊಳಿಯಪ್ಪ ಮನೆಯ ಬಾಗಿಲಿಗೆ ಬಂದಾಗ ಪೂಜೆ ಮಾಡಿ ಸೇವೆ ಸಲ್ಲಿಸುತ್ತಾರೆ.  ಇದು ಆ ಹಳ್ಳಿಯ ಈಗಿನ ಜೀವನ ಚಿತ್ರಣ.