Thursday 16 June 2016

ನಮ್ಮೂರ ಗಿಡಮರಗಳ ಬೇಲಿ ಎಲ್ಹೋದ್ವು?



ನಾನು ಈ ಬಾರಿ ಊರಿಗೆ ಹೋದಾಗ ಯಾಕೋ ಎಲ್ಲರ ಮನೆ, ತೋಟ, ಕಣ, ಜಮೀನುಗಳ  ಮುಂದೆ ತಂತಿಯಿಂದ ಕೂಡಿದ ಬೇಲಿ ತುಂಬಾ ಗಮನ ಸೆಳೆದವು. ನಾವು ಚಿಕ್ಕವರಿದ್ದಾಗ ಇದ್ದ  ಗಿಡಮರಗಳಿಂದ ಕೂಡಿದ ಬೇಲಿ ಕಾಣುವುದೇ  ಅಪರೂಪವಾಗಿಹೋಗಿವೆ. ನಮಗೆ ಬೇಲಿ ಎಂದಾಕ್ಷಣ ನೆನಪಾಗುವುದು ಬೇಲಿಯಲ್ಲಿನ ತೊಂಡೆಹಣ್ಣು, ಕಾಕಿಹಣ್ಣು, ಕಾರೆಹಣ್ಣು, ಈಚಲಹಣ್ಣು, ಬಾರೆಹಣ್ಣು, ಪೇರಲ, ಹುಣಸೆಹಣ್ಣು, ಕರಿಬೇವುಹಣ್ಣು ಕೆಲವೊಂದು ಹೆಸರೇ ಗೊತ್ತಿಲ್ಲದ ತಿನ್ನುವ ಹಣ್ಣುಗಳು ಮತ್ತು ಹಲವಾರು ಪಕ್ಷಿಗಳ ಗೂಡುಗಳು. ನಮಗೆ ದಾರಿಲ್ಲಿ ಕಾಲಿಗೆ ಮುಳ್ಳು ಚುಚ್ಚಿದಾಗ ಹಾಲವಾಣ ಗಿಡದ ಹಾಲು ಹಾಕಿ ಮುಳ್ಳು ತೆಗೆಯುತ್ತಿದ್ದದು. ಚಿಟ್ಟೆ ಹಿಡಿಯಿತ್ತಿದ್ದದ್ದು, ಕಳ್ಳಿ ಹಾಲಿನಿಂದ ಗಾಳಿಯಲ್ಲಿ ಗುಳ್ಳೆಗಳನ್ನು ಬರಿಸುತ್ತಿದ್ದದು. ಓಹ್ ಎಸ್ಟೋoದು  ನೆನಪುಗಳು.

ಇನ್ನು ಕೆಲವು ಮರಗಳು ಬೇಲಿಗೆoದೇ ಪ್ರಸಿದ್ಧವಾಗಿದ್ದವು. ಕವಳೆಕಾಯಿ, ಗಜ್ಜುಗ, ಅರಳು, ಸೀಗೆಕಾಯಿ, ಬೇವು, ಆಲದ ಮರ, ಗೋಣಿ, ತಂಗಡಿ, ಹಾಲವಾಣ, ನುಗ್ಗೆ, ಅಗಚೆ, ಗ್ಲಿರಿಸೀಡಿಯಾ ಮತ್ತೆ  ಇನ್ನೂ ಹಲವು ಸಿಲ್ವರ್ ಮರ , ಬೀಟೆ, ಸಾಗವಾನಿ, ಹುಣಸೇಮರ, ಮಾವಿನಮರ, ಹಲಸು, ಅಮಟೆಕಾಯಿ, ನುಗ್ಗೆಕಾಯಿಮರ, ಬೆಲ್ಲದ ಹಣ್ಣಿನ ಮರ, ಶಲ್ಲಕಾಯಿ  ಉಪ್ಪಿನಕಾಯಿ ಮರ, ಬುಗರಿಮರ, ಉಂಗುರಕಾಯಿ ಮರ, ಸುಬಾಬುಲ್, ಇವೆಲ್ಲಾ ಮರಗಳು ನಮ್ಮ ಹಳ್ಳಿಗಳಲ್ಲಿ ಬೆಳೆಸುತ್ತಿದ್ದರು.

ಗಿಡಮರಗಳಿಂದ ಕೂಡಿದ ಬೇಲಿ ತಿನ್ನಲು ಹಣ್ಣು, ತರಕಾರಿ, ಸೊಪ್ಪು, ಬಿಸಿಲಿಂದ ದಣಿದು ಬಂದವರಿಗೆ ನೆರಳು,  ಹಕ್ಕಿ ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು ಆಸರೆಯಾಗುತಿದ್ದವು, ಜೇನುಹುಳಗಳು ಗೂಡು ಕಟ್ಟಿಕೊಳ್ಳುತಿದ್ದವು. ನಮ್ಮ ಹಿರಿಯರು ಬಿರುಗಾಳಿಯಿಂದ ಬೆಳೆಗಳಿಗೆ ಆಗುವ ಅನಾಹುತ ತಪ್ಪಿಸಲು ಈ ಗಿಡಮರಗಳನ್ನು ಬೇಲಿ ರೂಪದಲ್ಲಿ ಹಾಕುತಿದ್ದರು. ಜನರು ಮನೆಗಳ ಸುತ್ತ, ಕಣಗಳ ಸುತ್ತ, ತೋಟ ಮತ್ತು ಹೊಲಗಳ ರಕ್ಷಣೆಗೆ ಮತ್ತು ಮಣ್ಣಿನ ಸವಕಳಿ ತಪ್ಪಿಸಲು, ನೀರನ್ನು ಭೂಮಿ ಹಿಡಿದಿಟ್ಟುಕೊಳ್ಳಲು ಬದುಗಳಲ್ಲಿ ಬೇಲಿಯಂತೆ ಹಾಕಿ ಕೊಳ್ಳುತಿದ್ದರು. ಈ ಎಲ್ಲ ಉಪಯೋಗ ತಂತಿ ಬೇಲಿಯಿಂದ ಆಗುತ್ತಾ?  ಈಗಿನ ಬೇಲಿಗಳಲ್ಲಿ ನಾವು ಕಾಣುವುದು  ಕಲ್ಲಿನ ಕಂಬ ಮತ್ತು ತಂತಿಯ ಬಲೆಗಳು ಮಾತ್ರ.  ತಂತಿಬೇಲಿ ಆಧುನಿಕ ಬೇಸಾಯ ಪದ್ಧತಿಯ ಇನ್ನೊಂದು ರೂಪವೇ? ಆದರೆ ಇಂದು ನಮ್ಮ ಆಧುನಿಕ ರೈತರು ತಂತಿ ಬೇಲಿ ಸಲುವಾಗಿ ಗಿಡಮರಗಳಿರಲಿ, ಹುಲ್ಲುಗಳಿಂದ ಕೂಡಿದ ಬದುಗಳನ್ನು ಜನರು ಒತ್ತಿಸಿ ತಂತಿ ಬೇಲಿ ಕಲ್ಲುಕಂಬ ಗಳನ್ನು ಹಾಕಿಕೊಂಡಿದ್ದಾರೆ.

ಗಿಡಮರಗಳ ಬೇಲಿಯು ಮಳೆ ನೀರು ಭೂಮಿಯಲ್ಲಿ ಇಂಗಿಸಿ ಅಂತರ್ಜಲ ಹೆಚ್ಚುವಂತೆ ಮಾಡುತ್ತೆ. .ಅಲ್ಲದೆ ಎಸ್ಟೋ ರೀತಿಯ ಪ್ರಾಣಿ, ಪಕ್ಷಿಗಳಿಗೆ ವಾಸಸ್ಥಾನವಾಗಿರುತ್ತಿದ್ದವು. ಅಲ್ಲಿ ವಾಸವಾಗಿದ್ದ ಎಸ್ಟೋ ಪ್ರಾಣಿ, ಪಕ್ಷಿಗಳು ನಮ್ಮ ಹೊಲದ ಬೆಳೆ ಹಾಳು ಮಾಡುವ ಇಲಿಗಳನ್ನು ಮತ್ತು ಕೀಟಗಳನ್ನು ಆಹಾರವಾಗಿ ತಿಂದು ಹಾಕಿ ರೈತನ ಮಿತ್ರನಂತೆ ಹೊಲಗಳ, ತೋಟಗಳ ರಕ್ಷಣೆ ಮಾಡುತ್ತಿದ್ದವು. ನಮ್ಮ ಸಾಕು ಪ್ರಾಣಿಗಳಾದ ಹಸು ಎಮ್ಮೆ ಗಳಿಗೆ ಮೇವು ದೊರೆಯುತ್ತಿತ್ತು. ಬಿಸಿಲಿನ ಧಗೆಗೆ ಬಳಲಿ ಬಂದವರಿಗೆ ನೆರಳು ದೊರೆಯುತ್ತಿತ್ತು. ಯಾವುದೇ ಖರ್ಚಿಲ್ಲದೆ ಆಗುವ ಬೇಲಿ ಇದು. ಇಸ್ಟೆಲ್ಲ ಸೃಜನ ಶೀಲತೆಯಿಂದ ಕೂಡಿದ ಬೇಲಿಯ ಬದಲು ರೈತ ಯಾಕೆ ತಂತಿ ಬೇಲಿಯ ಮೊರೆ ಹೋಗುತ್ತಿದ್ದಾನೋ ಗೊತ್ತಿಲ್ಲ. ಗಿಡ ಮರಗಳ ಜೊತೆ ಅಲ್ಲಿರುವ ಪ್ರಾಣಿ ಪಕ್ಷಿಗಳ ಜೊತೆ ಮನುಷ್ಯನ  ಸಹಬಾಳ್ವೆ ಜೀವನ ಎಷ್ಟು ಚೆನ್ನಾಗಿತ್ತು. ಆದರೆ ಈಗ ಮನುಷ್ಯ ತಾನೊಬ್ಬನೇ ಚೆನ್ನಾಗಿ ಬದುಕಬೇಕೆಂಬ ದುರಾಸೆಗೆ ತಂತಿ ಬೇಲಿ ಉತ್ತಮ ಉದಾಹರಣೆಯೇ?

ನಮ್ಮದು ಚಿತ್ರದುರ್ಗದ ಬಯಲು ಸೀಮೆಯ ನಾಡು, ನಮ್ಮ ರೈತರು ತಂತಿಬೇಲಿ ಬದಲು ಆ ಜಾಗದಲ್ಲಿ ತಮಗೆ ನಿತ್ಯ ಜೀವನಕ್ಕೆ ಬೇಕಾಗುವ ಗಿಡ ಮರಗಳು, ಹಣ್ಣಿನ  ಮರಗಳು, ತರಕಾರಿ ಕೊಡುವಂತಹ ಮರ, ಗಿಡಗಳನ್ನು ಹಾಕಿಕೊಂಡರೆ ನಮ್ಮ ಬಯಲುಸೀಮೆ ನಾಡೂ ಕೂಡ ಮಲೆನಾಡಾಗುತ್ತದೆ. ಅದರಲ್ಲಿ ಎರೆಡು ಮಾತಿಲ್ಲ. ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಕೃಷಿ ಭೂಮಿ ಮತ್ತು ರೈತರನ್ನು ಹೊಂದಿರುವ ದೇಶ ನಮ್ಮ ಭಾರತ ಆದರೂ ಅಪೌಸ್ಥಿಕತೆ ಯಿಂದ ನರಳುತ್ತಿರುವ ದೇಶವೂ ಹೌದು.  ಇದು ಹೇಗೆ ಸಾದ್ಯ? ಆಧುನಿಕ ರೈತರೇ  ನೀವೇ ಯೋಚಿಸಿ? ನೀವು ಚಿಕ್ಕವರಿರುವಾಗ ನಿಮ್ಮ ತಂದೆ ತಾಯಿ, ಅಜ್ಜ ಅಜ್ಜಿಯಂದಿರು ಹೇಗೆ ಬೇಸಾಯ ಮಾಡುತಿದ್ರು ಅವರ ಅನುಭವವನ್ನು ಸಲ್ಪ ನಿಮ್ಮ ಕೃಷಿಗೆ ಅಳವಡಿಸಿಕೊಳ್ಳಿ. 
  
ನಾನು ಹೀಗೆ ಕೆಲವರನ್ನು ವಿಚಾರಿಸಿದಾಗ ನನಗೆ ಸಿಕ್ಕ ಬೇಲಿಯ ಗಿಡ ಮರಗಳ ಮಾಹಿತಿ ಹೀಗಿತ್ತು. ಎಲ್ಲಾ ರೀತಿಯ ಗಿಡಮರಗಳನ್ನು ಬೇಲಿಯ ರೀತಿಯಲ್ಲಿ ಹಾಕಬಹುದು. ಇಂತಹುದೇ ಗಿಡ ಮರ ಅನ್ನೋ ನಿಯಮವೇನೂ ಇಲ್ಲ . ಆಯಾ ಜಾಗದ ಹೊಲದ ಮಣ್ಣು ಮತ್ತು ವಾತಾವರಣವನ್ನು ಅನುಸರಿಸಿ ಬೆಳೆಯುವ ಮತ್ತು ನಮಗೆ ತರಕಾರಿ ಹೂ ಹಣ್ಣು ಗಳನ್ನೂ ಒದಗಿಸಿವ ರೀತಿ  ಮತ್ತು ವ್ಯಾಪಾರೀ ದೃಷ್ಟಿಯಿಂದಲೂ ಗಿಡಮರಗಳ ಬೇಲಿ ನಿರ್ಮಿಸಬಹುದು ಎಂಬುದು.

ಇತ್ತೀಚೆಗಂತೂ ತೊಂಡೆ, ಹಾಗಲ, ಸೌತೆ, ಕುಂಬಳ, ಸೋರೆಕಾಯಿ, ಟೊಮೇಟೊ, ಹೀರೇಹಾಯಿ, ಪಡುವಲಕಾಯಿ, ಇಂತಹ ಬೇಲಿಯಲ್ಲಿ ಸಿಕ್ಕುತಿದ್ದ ತರಕಾರಿಯನ್ನೂ ರೈತನೂ ಸಂತೆಯಿಂದ ಕೊಂಡುತಂದು ತಿನ್ನುತ್ತಾನೆ. ಅದೇ ಇನ್ನೂ ನನಗೆ ಆಶ್ಚರ್ಯ ತರಿಸಿದ ಸಂಗತಿ. ನಾವು ಚಿಕ್ಕವರಿದ್ದಾಗ ಇವೆಲ್ಲ ನಮ್ಮ ಹಿತ್ತಲುಗಳಲ್ಲೇ ಚಪ್ಪರಕಟ್ಟಿ  ಅಥವಾ ಬೇಲಿಗಳಿಗೆ ಈ ತರಕಾರಿ ಬಳ್ಳಿಗಳನ್ನು  ಹಬ್ಬಿಸಿ  ಈ ಎಲ್ಲ ಕಾಯಿಪಲ್ಲೆ ತಾವೇ ಬೆಳೆದು ತಿನ್ನುತಿದ್ದರು. ಇನ್ನು ಬೇಕಾದ ತರಕಾರಿಗಳನ್ನ ಪಕ್ಕದಮನೆ  ಅಥವಾ ಪರಿಚಯದವರೊಡನೆ ಕಡ ಕೊಟ್ಟು ಕಡ ಇಸ್ಕೊಂತಿದ್ರು. ನಮಗೆ ಬೆಳೆದು ಕೊಡಬೇಕಾದ ರೈತನೇ ತರಕಾರಿಗಳನ್ನ ಕೊಂಡು ತಿನ್ನುವಂತಹ ಸ್ಥಿತಿ ತಂದುಕೊಂಡರೆ  ಹೇಗೆ? ಜಮೀನುಗಳಿಲ್ಲದೆ ಇರೋ ನಾವು ಊಟಕ್ಕೋಸ್ಕರ ಇನ್ನು ಮುಂದೆ ಏನೆಲ್ಲ ಪರದಾಡಬೇಕಾಗುವುದೋ ಏನೋ ?

.



No comments:

Post a Comment